
ಬೆಳಗಾವಿ: ಸಾರ್ವಜನಿಕ ಸ್ಥಳ ಹಾಗೂ ರಸ್ತೆಬದಿಯನ್ನೇ ಬಾರ್ ಮಾಡಿಕೊಂಡಿದ್ದ ಪುಂಡರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಮದ್ಯ ಸೇವಿಸುತ್ತಿದ್ದ 36 ಜನರನ್ನು ವಶಕ್ಕೆ ಪಡೆದ ಪೊಲೀಸರು ಪೊಲೀಸ್ ಸ್ಟೇಷನ್ ದರ್ಶನ ಮಾಡಿಸಿದ್ದಾರೆ.
ಕೇವಲ ಒಂದು ವಾರದಲ್ಲಿ ಪೊಲೀಸರು ಒಟ್ಟು 24 ಪ್ರಕರಣಗಳನ್ನು ದಾಖಲಿಸಿದ್ದು, ಮದ್ಯ ಸೇವಿಸುತ್ತಿದ್ದ 36 ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಜಮೀನುಗಳು, ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆ ಬದಿಗಳಲ್ಲಿ ಎಣ್ಣೆ ಪಾರ್ಟಿ ಮಾಡುವವರ ವಿರುದ್ಧ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ತೀವ್ರ ಗರಂ ಆಗಿದ್ದಾರೆ.
ರಾತ್ರಿ ವೇಳೆ ರಸ್ತೆಬದಿಯಲ್ಲಿ ಸಂಶಯಾಸ್ಪದವಾಗಿ ನಿಲ್ಲಿಸುವ ಕಾರುಗಳ ಮೇಲೆ ಪೊಲೀಸರು ಈಗ ಹದ್ದಿನ ಕಣ್ಣಿಟ್ಟಿದ್ದಾರೆ. ಕಾರನ್ನೇ ಬಾರ್ ಮಾಡಿಕೊಂಡು ಪಾರ್ಟಿ ಮಾಡುವುದು ಮಾತ್ರವಲ್ಲದೆ, ಕುಡಿದು ವಾಹನ ಚಲಾಯಿಸುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಂದ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೇಲೆ ನಿಗಾ ಇರಿಸಲಾಗಿದ್ದು, ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಕಂಡುಬಂದಲ್ಲಿ ತಕ್ಷಣವೇ ಅಂತಹವರನ್ನು ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ. ಈ ಪೊಲೀಸ್ ಕ್ರಮದಿಂದಾಗಿ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದು, ರಸ್ತೆ ಪಕ್ಕದ ಪುಂಡಾಟಿಕೆಗೆ ಬ್ರೇಕ್ ಬೀಳುವ ನಿರೀಕ್ಷೆಯಿದೆ.




