ಕೂಲ್ ಡ್ರಿಂಕ್ಸ್ ಹೆಸರಲ್ಲಿ ಮಕ್ಕಳಿಗೆ ವಿಷ ? ತಂಪು ಪಾನೀಯಗಳ ವಿರುದ್ಧ ಮಕ್ಕಳ ಆಯೋಗ ಗರಂ!

ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಮಕ್ಕಳಿಗೆ ನೀವು ಕುಡಿಸುತ್ತಿರುವ ಕೂಲ್ ಡ್ರಿಂಕ್ಸ್ಗಳು ವಾಸ್ತವವಾಗಿ ಅಮೃತವಲ್ಲ, ಬದಲಿಗೆ ಅಡಗಿರುವ ‘ವಿಷ’ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬಣ್ಣಬಣ್ಣದ ತಂಪು ಪಾನೀಯಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಮಿಶ್ರಣವಾಗಿರುವ ಸಾಧ್ಯತೆಗಳಿದ್ದು, ಪೋಷಕರು ತಮ್ಮ ಮಕ್ಕಳಿಗೆ ಇವುಗಳನ್ನು ಕೊಡಿಸುವ ಮುನ್ನ ಹತ್ತು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಮಕ್ಕಳ ನೆಚ್ಚಿನ ಈ ತಂಪು ಪಾನೀಯಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ಬೇಸಿಗೆ ಕಾಲದಲ್ಲಿ ದಾಹ ತಣಿಸಿಕೊಳ್ಳಲು ಮಕ್ಕಳು ಹೆಚ್ಚಾಗಿ ಇವುಗಳನ್ನೇ ಅವಲಂಬಿಸುತ್ತಿದ್ದು, ಇದು ಅವರ ದೀರ್ಘಕಾಲದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿರುವ ಪಾನೀಯಗಳ ಗುಣಮಟ್ಟವನ್ನು ತಕ್ಷಣವೇ ಪರಿಶೀಲಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಈ ಗಂಭೀರ ವಿಚಾರವನ್ನು ಪರಿಗಣಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈಗ ಅಖಾಡಕ್ಕಿಳಿದಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ವಿವಿಧ ಬ್ರಾಂಡ್ಗಳ ತಂಪು ಪಾನೀಯಗಳ ಗುಣಮಟ್ಟದ ಬಗ್ಗೆ ತನಿಖೆ ನಡೆಸುವಂತೆ ಔಷಧ ನಿಯಂತ್ರಣ ಇಲಾಖೆಗೆ ಆಯೋಗವು ಪತ್ರ ಬರೆದಿದೆ. ಪಾನೀಯಗಳಲ್ಲಿ ಯಾವೆಲ್ಲಾ ರಾಸಾಯನಿಕಗಳಿವೆ ಮತ್ತು ಅವು ಮಕ್ಕಳ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದರ ಬಗ್ಗೆ ಸಮಗ್ರ ವರದಿ ನೀಡುವಂತೆ ಮನವಿ ಮಾಡಿದೆ.
ಬಣ್ಣ ಮತ್ತು ರುಚಿಗಾಗಿ ಬಳಸುವ ರಾಸಾಯನಿಕಗಳು ಮಕ್ಕಳಲ್ಲಿ ಅಲರ್ಜಿ, ಹೈಪರ್ ಆಕ್ಟಿವಿಟಿ ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಶಂಕೆ ಇದೆ. ಈ ತನಿಖಾ ವರದಿ ಬಂದ ನಂತರ ಸರ್ಕಾರವು ಇಂತಹ ಪಾನೀಯಗಳ ಮಾರಾಟದ ಮೇಲೆ ಕಠಿಣ ನಿಯಮಗಳನ್ನು ಹೇರುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಪೋಷಕರು ತಮ್ಮ ಮಕ್ಕಳಿಗೆ ಮಾರುಕಟ್ಟೆಯ ಪಾನೀಯಗಳಿಗಿಂತ ನೈಸರ್ಗಿಕ ಹಣ್ಣಿನ ರಸ ಅಥವಾ ಎಳನೀರನ್ನು ನೀಡುವುದು ಉತ್ತಮ ಎಂಬ ಸಲಹೆ ಕೇಳಿಬಂದಿದೆ.




