Friday, February 20, 2026
26.9 C
Bengaluru
Google search engine
LIVE
ಮನೆಜಿಲ್ಲೆಬಂಡೀಪುರ, ನಾಗರಹೊಳೆ ಸಫಾರಿ ಪುನಾರಂಭಕ್ಕೆ ಅನುಮತಿ; ರೈತರಿಂದ ತೀವ್ರ ವಿರೋಧ

ಬಂಡೀಪುರ, ನಾಗರಹೊಳೆ ಸಫಾರಿ ಪುನಾರಂಭಕ್ಕೆ ಅನುಮತಿ; ರೈತರಿಂದ ತೀವ್ರ ವಿರೋಧ

ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಶ್ವಪ್ರಸಿದ್ಧ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಆರಂಭಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ. ಮಾನವ ಮತ್ತು ವನ್ಯಪ್ರಾಣಿಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ 7ರಂದು ಮುನ್ನೆಚ್ಚರಿಕಾ ಕ್ರಮವಾಗಿ ಸಫಾರಿಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಈ ಅವಧಿಯಲ್ಲಿ ಅರಣ್ಯ ಇಲಾಖೆಯು ಕಾಡಂಚಿನ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಿ, ಸುಮಾರು 27 ಹುಲಿ ಮತ್ತು ಮರಿಗಳನ್ನು ಸೆರೆಹಿಡಿಯುವ ಮೂಲಕ ಸಂಘರ್ಷ ನಿಯಂತ್ರಿಸಲು ಕ್ರಮ ಕೈಗೊಂಡಿತ್ತು.

ಸಫಾರಿ ನಿಷೇಧದಿಂದಾಗಿ ಪ್ರವಾಸೋದ್ಯಮದ ಮೇಲೆ ಹೊಡೆತ ಬಿದ್ದಿತ್ತು. ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರು ಸಫಾರಿ ಪುನಾರಂಭಕ್ಕೆ ನಿರಂತರ ಒತ್ತಾಯ ಹೇರುತ್ತಿದ್ದರು. ಅಲ್ಲದೆ, ವನ್ಯಜೀವಿ ಪ್ರೇಮಿಗಳು ನೆರೆ ರಾಜ್ಯಗಳತ್ತ ಮುಖ ಮಾಡುತ್ತಿದ್ದರಿಂದ ಆರ್ಥಿಕ ನಷ್ಟದ ಭೀತಿಯೂ ಎದುರಾಗಿತ್ತು. ಪ್ರಸ್ತುತ ಕಾಡಂಚಿನಲ್ಲಿ ವನ್ಯಜೀವಿಗಳ ಹಾವಳಿ ಕೊಂಚ ಕಡಿಮೆಯಾಗಿರುವ ಬಗ್ಗೆ ತಾಂತ್ರಿಕ ಸಮಿತಿ ನೀಡಿದ ವರದಿಯ ಆಧಾರದ ಮೇಲೆ, ಹಂತ ಹಂತವಾಗಿ ಸಫಾರಿ ಆರಂಭಿಸಲು ಸಚಿವರು ಅನುಮತಿ ನೀಡಿದ್ದಾರೆ.

ಆದರೆ ಸರ್ಕಾರದ ಈ ನಿರ್ಧಾರಕ್ಕೆ ರೈತ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಸಫಾರಿ ನಿಷೇಧವಿದ್ದ ಕಾರಣದಿಂದಲೇ ಕಳೆದ ಕೆಲವು ತಿಂಗಳುಗಳಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ರೈತರ ವಾದವಾಗಿದೆ. ವನ್ಯಪ್ರಾಣಿಗಳು ಇನ್ನೂ ನಾಡಿನತ್ತ ಸುಳಿಯುತ್ತಲೇ ಇರುವಾಗ ಸಫಾರಿ ಆರಂಭಿಸುವುದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸಫಾರಿ ಆರಂಭವಾದ ನಂತರ ಮತ್ತೆ ಮಾನವ-ವನ್ಯಜೀವಿ ಸಂಘರ್ಷ ಏರ್ಪಟ್ಟು ಪ್ರಾಣಹಾನಿಯಾದರೆ ಅದಕ್ಕೆ ನೇರವಾಗಿ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.

ಸದ್ಯ ಸರ್ಕಾರದ ಆದೇಶದಂತೆ ಸಫಾರಿ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿದ್ದರೆ, ಅತ್ತ ರೈತರು ಮಾತ್ರ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕಾಡಂಚಿನ ಭಾಗದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆರ್ಥಿಕ ಲಾಭಕ್ಕಿಂತ ಜನರ ಜೀವ ಮುಖ್ಯ ಎಂದು ರೈತ ಮುಖಂಡರು ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments