ಫ್ರೀಡಂ ಟಿವಿ ನ್ಯೂಸ್ ಬ್ಯೂರೋ: ಒಂದೇ ಸೈಟನ್ನು ಇಬ್ಬರು ಮೂವರು ಖರೀದಿದಾರರಿಗೆ ಹಂಚಿ ಅವರ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದ ಬಿಡಿಎ ಪಾಪಿಗಳ ಅಂಡಿಗೆ ಬರೆ ಬಿದ್ದಿದೆ.
ಲಂಚಬಾಕರನ್ನು ಕ್ಷಣವೂ ಸಹಿಸದ, ರಾಜ್ಯ ಕಂಡ ಅಪರೂಪದ IAS ಅಧಿಕಾರಿ, ಬಿಡಿಎ ಕಮಿಷನರ್ ಮೇಜರ್ ಮಣಿವಣ್ಣನ್ ಅವರು ಕಾಮ್ ಚೋರ್ ಗಳ ಬುರುಡೆಗೆ ಬಿಸಿನೀರು ಬಿಟ್ಟಿದ್ದಾರೆ.

ಒಂದೇ ಸೈಟನ್ನು ಇಬ್ಬರು ಮೂವರಿಗೆ ಬಿಡಿಎ ಕಾರ್ಯದರ್ಶಿಗಳು ಹಂಚಿಕೆ ಮಾಡಿದ್ದರು. ಎಲ್ಲ ದಾಖಲಾತಿ ಮುಗಿದು ಖಾತೆ ಮಾಡಲು ಹೋದಾಗ ತಮ್ಮ ಸೈಟು ಬೇರೆಯವರ ಹೆಸರಿಗೆ ಈಗಾಗಲೇ ಹಂಚಿಕೆ ಅಗರುವುದು ಗೊತ್ತಾಗುತ್ತಿತ್ತು. ಇದರಿಂದ ಹಂಚಿಕೆದಾರರು ಕಂಗಾಲಾಗಿದ್ದರು. ಸಮಸ್ಯೆ ಹೇಳಿ DS ಗಳ ಹತ್ತಿರ ಹೋದರೆ ಅವರುಗಳು ಮತ್ತೆ ಲಂಚಕ್ಕೆ ನಾಲಗೆ ಚಾಚುತ್ತಿದ್ದರು. ತಮ್ಮ ಏಜೆಂಟ್ ಗಳನ್ನು ಬಿಟ್ಟು ಪೀಡಿಸುತ್ತಿದ್ದರು. ಇದರಿಂದ ಸಮಸ್ಯೆಗೆ ಸಿಲುಕಿದ್ದ ನಿವೇಶನದಾರರು ಕಮಿಷನರ್ ಗೆ ದೂರು ಕೊಟ್ಟಿದ್ದರು. ಇದರಿಂದ ಸಿಟ್ಟಾದ ಆಯುಕ್ತ ಮೇ. ಮಣಿವಣ್ಣನ್, “ಮಾಡಿರುವ ತಪ್ಪುಗಳನ್ನು ಸರಿ ಪಡಿಸಿ ಅಲ್ಲಿವರೆಗೆ ನೀವು ಬೇರೆ ಕೆಲ್ಸ ಮಾಡೋದು ಬೇಡ,”ಎಂದು DS-4 ಕಚೇರಿ ಅಧಿಕಾರಿ ನೌಕರರಿಗೆ ಉಗಿದು ಕೂರಿಸಿದ್ದಾರೆ.
ಇಡೀ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಯಾರಿಗೆ ಯಾವ ಸೈಟ್ ನೀಡಲಾಗಿದೆ ಎಂಬುದರ ಬಗ್ಗೆ ಜಿಯೋ ಮ್ಯಾಪಿಂಗ್ ನೀಡಬೇಕು. ರಿಪೋರ್ಟ್ ನೀಡುವ ತನಕ ಕಾರ್ಯದರ್ಶಿ ಕಚೇರಿಯ ನೌಕರರು ಬೇರೆ ಯಾವುದೇ ಕೆಲಸ ಮಾಡುವುದು ಬೇಡ ಎಂದು ಖಡಕ್ ಆಗಿ ಸೂಚಿಸಿದ್ದಾರೆ.
ಹೀಗಾಗಿ ಎರಡು ದಿನದಿಂದ “ಸಾರ್ವಜನಿಕ ಸಂದರ್ಶನ ಇಲ್ಲವೆಂಬ ಬೋರ್ಡ್ ಹಾಕಿ ಬಾಗಿಲು ಹಾಕಿಕೊಂಡು ಡಿಎಸ್-೪ ಕಚೇರಿ ನೌಕರರು ಕೆಲ್ಸ ಮಾಡ್ತಿದ್ದಾರೆ.
ಕಚೇರಿಯ ಕೆಲಸ ಬಂದ್ ಮಾಡಿ, ಡೋರ್ ಲಾಕ್ ಮಾಡಿ ಸಾರ್ವಜನಿಕರಿಗೆ ಯಾರೂ ಬರದಂತೆ ನಿರ್ಭಂದ ಹೇರಲಾಗಿದೆ.
ವಿಶೇಷ ಎಂದರೆ ಉಪಕಾರ್ಯದರ್ಶಿ 4 ರ ಮುಂದೆ ದಿನಾಂಕ ನಮೂದಿಸದೆ ನಾಳೆ ಬಾ ನಾಡಿದ್ದು ಬಾ ಎಂದು ಬೋರ್ಡ್ ಲಗತ್ತಿಸಲಾಗಿದೆ.
ಬಿಡಿಎ ಪೋಸ್ಟಿಂಗ್ ಕೇಳುವ ಬಹುತೇಕರು ಇಲ್ಲಿ ಹಣ ಮಾಡಬಹುದು ಎಂಬ ಉದ್ದೇಶ ಇಟ್ಟುಕೊಂಡು ಬರ್ತಿದ್ದಾರೆ. ಬೇನಾಮಿ ವ್ಯಕ್ತಿಗಳ ಮೂಲಕ ರಿಯಲ್ ಎಸ್ಟೇಟ್ ವ್ಯಾಪಾರ ಮಾಡ್ತಾರೆ ಎನ್ನಲಾಗ್ತಿದೆ. ಇಂಥ ನೌಕರ ವರ್ಗಕ್ಕೆ ಮಣಿವಣ್ಣನ್ ಅವರ ಲಂಚಮುಕ್ತ ಆಡಳಿತ ಶೈಲಿಯು ನಡುಕ ಹುಟ್ಟಿಸಿದೆ ಎಂದು ಬಿಡಿಎ ಮೂಲಗಳು ಫ್ರೀಡಂ ಟಿವಿ ಗೆ ತಿಳಿಸಿವೆ.
DS -4 ಜಿಎಂ ರವೀಂದ್ರ ಅವರು ಮೊನ್ನೆಯಷ್ಟೇ ಸಹಕಾರ ಇಲಾಖೆಯಿಂದ ಬಂದು ಕೂತಿದ್ದಾರೆ. ಇವರ ನೇಮಕಕ್ಕೆ ವ್ಯಾಪಕ ಅಸಮಾಧಾನ ಕೂಡ ಬಿಡಿಎ ನಲ್ಲಿ ಇದೆ.