ಶ್ರೀಲಂಕಾದಲ್ಲಿ ಪಾಕ್ ಕ್ರಿಕೆಟಿಗನ ‘ಕಾಮ’ದಾಟ; ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ!

ಶ್ರೀಲಂಕಾದ ಕ್ಯಾಂಡಿ ಹೋಟೆಲ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನೊಬ್ಬ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ನಡೆದ ಈ ಘಟನೆಯು ಕ್ರಿಕೆಟ್ ವಲಯದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಹೋಟೆಲ್‌ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಯೊಂದಿಗೆ ಆಟಗಾರ ಅಶಿಸ್ತಿನಿಂದ ನಡೆದುಕೊಂಡಿದ್ದು, ಸಂತ್ರಸ್ತೆ ಸಹಾಯಕ್ಕಾಗಿ ಕೂಗಿದಾಗ ಹೋಟೆಲ್‌ನ ಇತರ ಸಿಬ್ಬಂದಿ ಧಾವಿಸಿ ಬಂದು ಆಕೆಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ಈ ಗಂಭೀರ ವಿಚಾರದ ಬಗ್ಗೆ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಅವರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಹೋಟೆಲ್ ಆಡಳಿತ ಮಂಡಳಿಯು ಘಟನೆಯನ್ನು ಖಂಡಿಸಿದೆ. ಆದರೆ, ತನಿಖೆಯ ಹಂತದಲ್ಲಿರುವ ಕಾರಣ ಮತ್ತು ತಂಡದ ಗೌರವದ ದೃಷ್ಟಿಯಿಂದ ಪಾಕ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಹಲ್ಲೆ ನಡೆಸಿದ ಆಟಗಾರನ ಹೆಸರನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ಘಟನೆಯಿಂದಾಗಿ ಪಾಕಿಸ್ತಾನ ಕ್ರಿಕೆಟ್ ತಂಡವು ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗುವಂತಾಗಿದೆ.
ಸಂಬಂಧಪಟ್ಟ ಕ್ರಿಕೆಟಿಗನನ್ನು ಶೀಘ್ರದಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ವಿಶೇಷವೆಂದರೆ, ಇದೇ ಆಟಗಾರ ಈ ಹಿಂದೆ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲೂ ಇದೇ ರೀತಿಯ ಅಸಭ್ಯ ವರ್ತನೆಯ ಆರೋಪ ಎದುರಿಸಿದ್ದ ಎನ್ನಲಾಗಿದೆ. ಪದೇ ಪದೇ ಶಿಸ್ತು ಉಲ್ಲಂಘಿಸುತ್ತಿರುವ ಆಟಗಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಈಗಾಗಲೇ ಚಾಲ್ತಿಯಲ್ಲಿರುವ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲೇ ಹೊರಬಿದ್ದಿರುವ ಪಾಕಿಸ್ತಾನ ತಂಡಕ್ಕೆ, ಈ ಲೈಂಗಿಕ ಕಿರುಕುಳದ ಆರೋಪ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೈದಾನದ ಒಳಗೆ ಮಾತ್ರವಲ್ಲದೆ ಮೈದಾನದ ಹೊರಗೂ ಆಟಗಾರರ ನಡವಳಿಕೆ ಹಳಿತಪ್ಪುತ್ತಿರುವುದು ಪಾಕಿಸ್ತಾನ ಕ್ರಿಕೆಟ್‌ನ ಅವನತಿಗೆ ಸಾಕ್ಷಿಯಾಗಿದೆ ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.




