ಮಂಗಳೂರು: ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಶೋಕ ಜನಮನ -2025 ಕಾರ್ಯಕ್ರಮದಲ್ಲಿ ನೂಕುನುಗ್ಗಲು ಸಂಭವಿಸಿ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿದೆ.. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಪುತ್ತೂರುಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಈ ಅವಘಡ ಸಂಭವಿಸಿದ್ದು, ಮಹಿಳೆಯರು , ಮಕ್ಕಳು ಅಸ್ವಸ್ಥಗೊಂಡಿದ್ದಾರೆ.. ಅಸ್ವಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಪುತ್ತೂರು ಶಾಸಕ ಅಶೋಕ್ ರೈ ಮಾಲೀಕತ್ವದ ರೈ ಎಸ್ಟೇಟ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ʻಅಶೋಕ ಜನಮನ -2025ʼ ಹಾಗೂ ದೀಪಾವಳಿ ಪ್ರಯುಕ್ತ ವಸ್ತ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೀಪಾವಳಿ ಹಿನ್ನೆಲೆ ಸಾರ್ವಜನಿಕರಿಗೆ ತಟ್ಟೆ, ವಸ್ತ್ರ ಹಂಚುವ ಕಾರ್ಯಕ್ರಮ ಇದಾಗಿತ್ತು. ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕ್ರೀಡಾಂಗಣದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಭಾಗಿಯಾಗಿದ್ದ ಹಿನ್ನೆಲೆ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಕೆಲವರಿಗೆ ಉಸಿರಾಟದಲ್ಲಿ ಸಮಸ್ಯೆ ಉಂಟಾಗಿದ್ದು, ಅಸ್ವಸ್ಥರಾಗಿದ್ದಾರೆ. ಪುಟ್ಟ ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಹೊತ್ತುಬಂದಿದ್ದ ಕೆಲವರು ನೀರು ಸಿಗದೇ ಪರದಾಡಿದ್ದಾರೆ. ಇದರಿಂದ ಕೆಸರು ತುಂಬಿದ್ದ ಮೈದಾನದಲ್ಲಿ ಅವ್ಯವಸ್ಥೆ ಉಂಟಾಗಿದೆ.


