#Exclusive NewsTop Newsರಾಜ್ಯಶಿಕ್ಷಣಸುದ್ದಿ

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನೋ ಎಂಟ್ರಿ!

ಡಿಜಿಟಲ್ ವ್ಯಸನದಿಂದ ಮಕ್ಕಳನ್ನು ಮುಕ್ತಗೊಳಿಸಲು ಮುಂದಾಗಿರುವ ಕರ್ನಾಟಕ ಸರ್ಕಾರ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ಅಧಿಕೃತವಾಗಿ ನಿಷೇಧಿಸಿ ಮಹತ್ವದ ಘೋಷಣೆ ಮಾಡಿದೆ. ಮೊಬೈಲ್ ಮತ್ತು ಅತಿಯಾದ ಇಂಟರ್ನೆಟ್ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ದೈಹಿಕ ಆರೋಗ್ಯ ಸಮಸ್ಯೆಗಳು ಮತ್ತು ಸಾಮಾಜಿಕ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲು ಈ ಕಠಿಣ ಕ್ರಮ ಅನಿವಾರ್ಯ ಎಂದು ಸರ್ಕಾರ ಬಜೆಟ್‌ನಲ್ಲಿ ಪ್ರತಿಪಾದಿಸಿದೆ.

ಆಸ್ಟ್ರೇಲಿಯಾ ಮತ್ತು ಫಿನ್‌ಲ್ಯಾಂಡ್‌ನಂತಹ ದೇಶಗಳು ಈಗಾಗಲೇ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಅದೇ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗುತ್ತಿದೆ. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ವ್ಯಕ್ತಪಡಿಸಿದ್ದ ಕಳಕಳಿಯಂತೆ, ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯಿಂದ ಅಪ್ರಾಪ್ತರಿಗೆ ಆಗುತ್ತಿರುವ ಹಾನಿಯನ್ನು ತಡೆಯುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ. 2025-26ರ ಆರ್ಥಿಕ ಸಮೀಕ್ಷೆಯ ಶಿಫಾರಸಿನ ಅನ್ವಯ, ಮಕ್ಕಳ ಭವಿಷ್ಯ ಕಾಪಾಡಲು ವಯೋಮಿತಿ ಆಧಾರಿತ ನಿರ್ಬಂಧವನ್ನು ಅಧಿಕೃತಗೊಳಿಸಲಾಗಿದೆ.

ಕೇವಲ ನಿಷೇಧ ಹೇರುವುದಷ್ಟೇ ಅಲ್ಲದೆ, ಮಕ್ಕಳನ್ನು ಸ್ಕ್ರೀನ್‌ನಿಂದ ಹೊರತಂದು ಅವರಲ್ಲಿ ಜವಾಬ್ದಾರಿಯುತ ಡಿಜಿಟಲ್ ಬಳಕೆಯ ಬಗ್ಗೆ ಅರಿವು ಮೂಡಿಸಲು ‘ಡಿಜಿಟಲ್ ಡಿಟಾಕ್ಸಿಫಿಕೇಷನ್’ ಮತ್ತು ‘ಬಿಯಾಂಡ್ ಸ್ಕ್ರೀನ್ಸ್’ ನಂತಹ ವಿಶೇಷ ಕಾರ್ಯಕ್ರಮಗಳಿಗೆ ಸರ್ಕಾರ ಒತ್ತು ನೀಡಿದೆ. ಈ ನಿರ್ಧಾರವು ರಾಜ್ಯದ ಲಕ್ಷಾಂತರ ಪೋಷಕರಲ್ಲಿ ಸಂತಸ ಮೂಡಿಸಿದ್ದು, ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆಗೆ ಇದು ಪೂರಕವಾಗಲಿದೆ ಎಂದು ಅಂದಾಜಿಸಲಾಗಿದೆ.

Comments (0)

Your email address will not be published. Required fields are marked *

Back to top button