ಕ್ರೈಂ ಸ್ಟೋರಿದೇಶ/ವಿದೇಶಸುದ್ದಿ

ನೀಟ್ ಆಕಾಂಕ್ಷಿ ಮೇಲೆ ಅತ್ಯಾಚಾರ; ಮಗು ಜನಿಸುತ್ತಿದ್ದಂತೆಯೇ ಪರಾರಿಯಾದ ಪತಿ!

ಲಕ್ನೋ: ನೀಟ್ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದ ಆಕಾಂಕ್ಷಿಯೊಬ್ಬರ ಮೇಲೆ ಮಾದಕ ದ್ರವ್ಯ ನೀಡಿ ಅತ್ಯಾಚಾರವೆಸಗಿ, ಮಗು ಜನಿಸಿದ ಬಳಿಕ ಪತ್ನಿ ಮತ್ತು ಮಗುವನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.

2023ರಲ್ಲಿ ತರಬೇತಿಗಾಗಿ ಗೋಮತಿ ನಗರದಲ್ಲಿದ್ದ ಸಂತ್ರಸ್ತೆಗೆ ಕ್ಯಾಬ್ ಚಾಲಕ ಆದಿತ್ಯ ಯಾದವ್ ಪರಿಚಯವಾಗಿದ್ದು, ಸ್ನೇಹದ ನೆಪದಲ್ಲಿ ಹೋಟೆಲ್‌ಗೆ ಕರೆದೊಯ್ದು ಚಹಾದಲ್ಲಿ ಮಾದಕ ದ್ರವ್ಯ ಬೆರೆಸಿ ಅತ್ಯಾಚಾರವೆಸಗಿದ್ದನು. ಇದರಿಂದ ಯುವತಿ ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆಯೇ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಮದುವೆಯ ನಾಟಕವಾಡಿದ್ದ ಆದಿತ್ಯ, ಹೆರಿಗೆಯಾಗಿ ಮಗಳು ಹುಟ್ಟಿದ ಮೂರೇ ದಿನಕ್ಕೆ ಔಷಧ ತರುವುದಾಗಿ ಹೇಳಿ ನಾಪತ್ತೆಯಾಗಿದ್ದಾನೆ.

ತನ್ನ ಫೋನ್ ನಂಬರ್ ಬದಲಾಯಿಸಿ ಸಂಪರ್ಕಕ್ಕೆ ಸಿಗದ ಆತ, ಸಂತ್ರಸ್ತೆ ತನ್ನ ಸ್ನೇಹಿತರ ಮೂಲಕ ಸಂಪರ್ಕಿಸಿದಾಗ “ನೀನು ಮತ್ತು ನಿನ್ನ ಮಗಳು ಬದುಕಲು ಅರ್ಹರಲ್ಲ” ಎಂದು ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ. ಪ್ರಸ್ತುತ ನೊಂದ ಮಹಿಳೆ ನೀಡಿದ ದೂರಿನನ್ವಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button