ನನ್ನ ಗಂಡ ಕಳ್ಳನಲ್ಲ : ನಮ್ಮಪ್ಪನೇ ಕಳ್ಳ

ಗದಗ : ಬಾಣಂತಿ ನವಜಾತ ಶಿಶುವಿನೊಂದಿಗೆ ಪೊಲೀಸ್ ಠಾಣೆಯ ಮುಂದೆ ಡ್ರಾಮಾ ಮಾಡಿದ್ದಾಳೆ. ಕಳ್ಳತನ ಪ್ರಕರಣದಲ್ಲಿ ಗಂಡನನ್ನು ಬಂಧಿಸಿದ್ದಾರೆ ಎಂದು ತಿಳಿದು ಗಂಡನನ್ನು ಬಿಡುಗಡೆಗೊಳಿಸುವಂತೆ ಹೆರಿಗೆಯಾಗಿ ಕೇವಲ 2 ಗಂಟೆಯಲ್ಲಿಯೇ ಹಸುಗೂಸಿನ ಜೊತೆಗೆ ಗದಗ ಗ್ರಾಮೀಣ ಠಾಣೆ ಮುಂದೆ ನಾಟಕ ಮಾಡಿದ್ದಾಳೆ.
ನಮ್ಮಪ್ಪ ಕಳ್ಳ. ಆದರೆ ನನ್ನ ಗಂಡ ಕಳ್ಳನಲ್ಲ ಎಂದು ಬಾಣಂತಿ ಪೊಲೀಸರ ಜೊತೆಗೆ ವಾದ ಮಾಡಿದ್ದಾಳೆ. ಬೈಕ್ ಕಳ್ಳತನ ಪ್ರಕರಣದಲ್ಲಿ ಬಾಣಂತಿಯ ಗಂಡ ಗದಗ ಗ್ರಾಮೀಣ ಪೊಲೀಸರಿಗೆ ಬೇಕಾಗಿದ್ದ. ಶಭಾನಾ ಮಣ್ಣವಡ್ಡರ್ ಎನ್ನುವ ಮಹಿಳೆ ಗಲಾಟೆ ಮಾಡಿದ್ದಾಳೆ. ಭಾನುವಾರ ಮಧ್ಯಾನ 3:00 ಯಿಂದಲೇ ಠಾಣೆ ಮುಂದೆ ನಾಟಕ ಮಾಡುತ್ತಾ ಕುಳಿತಿದ್ದಳು.

ನಗರದ ಹೊರವಲಯದಲ್ಲಿರುವ ಜೀಮ್ಸ್ ಆಸ್ಪತ್ರೆಯಲ್ಲಿ ಶಭಾನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಗಂಡನ ಬಂಧನವಾಗಿ ಅಂತ ಜೀಮ್ಸ್ ಆಸ್ಪತ್ರೆಯಿಂದ ನವಜಾತ ಶಿಶುವಿನೊಂದಿಗೆ ಗ್ರಾಮೀಣ ಠಾಣೆಗೆ ಓಡೋಡಿ ಬಂದಿದ್ದಾಳೆ. ಬಾಣಂತಿ ತಂದೆ ಗೋಪಾಲ ವಾಲ್ಮೀಕಿ ಎನ್ನುವಾತ ಮನೆ ಕಳ್ಳತನದ ಆರೋಪಿಯಾಗಿದ್ದ. ಜೊತೆಗೆ ಶಭಾನಾ ಗಂಡನ ಮೇಲೆಯೂ ಹುಬ್ಬಳ್ಳಿಯ ಹಲವು ಠಾಣೆಗಳಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಬೈಕ್ ಕಳ್ಳತನ ಪ್ರಕರಣದಲ್ಲಿ ನನ್ನ ಗಂಡನನ್ನ ಪೊಲೀಸರು ಬಂಧಿಸಿದ್ದಾರೆ. ಕೂಡಲೇ ಅವನನ್ನು ಬಿಡುಗಡೆ ಮಾಡಬೇಕು ಅಂತಾ ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದಾಳೆ.
ಗ್ರಾಮೀಣ ಪೊಲೀಸರ ಮುಂದೆ ಅತ್ತು ಕರೆದು ಬಾಣಂತಿ ನಾಟಕ ಮಡಿದ್ದಾಳೆ. ಆದರೆ, ಪೊಲೀಸರು ನಾವು ಯಾರನ್ನು ಬಂಧಿಸಿಲ್ಲ ಅಂತ ಹೇಳಿದ್ದಾರೆ. ಅವರು ತಲೆಮರಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರೂ ಬಾಣಂತಿ ಪೊಲೀಸರ ಜೊತೆ ವಾದಕ್ಕೆ ಇಳಿದಿದ್ದಳು. ಅಂತಿಮವಾಗಿ ಬಾಣಂತಿಯನ್ನು ಮನವೊಲಿಸಿದ ಪೊಲೀಸರು ಆಸ್ಪತ್ರೆಗೆ ಕಳುಹಿಸಿದ್ದಾರೆ. ಒಟ್ಟಾರೆಯಾಗಿ ಬಾಣಂತಿಯ ಕಿರಿಕಿರಿಯಿಂದಾಗಿ ಗದಗ ಗ್ರಾಮೀಣ ಠಾಣೆಯ ಪೊಲೀಸರು ಕೆಲವು ಗಂಟೆಗಳ ಕಾಲ ಹೈರಾಣಾಗಿ ಹೋಗಿದ್ದರು.




