Top Newsಜಿಲ್ಲೆಸುದ್ದಿ

ಮಟ್ಟಣ್ಣನವರ್‌ಗೆ ಮುಡಾ ಹೋರಾಟಗಾರ ಸ್ನೇಹಮಯಿ ಕೃಷ್ಣ ಟಾಂಗ್!

ಮೈಸೂರಿನ ಮುಡಾ ಹಗರಣದ ಬೆನ್ನಲ್ಲೇ ಈಗ ಸೌಜನ್ಯ ಕೇಸ್‌ ವಿಚಾರವಾಗಿ ಹೋರಾಟಗಾರ ಸ್ನೇಹಮಯಿ ಕೃಷ್ಣ ಮತ್ತು ಗಿರೀಶ್ ಮಟ್ಟಣ್ಣನವರ್ ನಡುವೆ ವಾಕ್ಸಮರ ಶುರುವಾಗಿದೆ. ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ನೀಡಿದ್ದ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಸ್ನೇಹಮಯಿ ಕೃಷ್ಣ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ತಾವು ಮಾಡುವ ಪ್ರತಿಯೊಂದು ಆರೋಪವೂ ದಾಖಲೆಗಳ ಆಧಾರದ ಮೇಲೆ ಇರುತ್ತದೆಯೇ ಹೊರತು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಡಾ ಹಗರಣವನ್ನು ಉಲ್ಲೇಖಿಸಿ ಮಾತನಾಡಿರುವ ಸ್ನೇಹಮಯಿ ಕೃಷ್ಣ, “ನನ್ನ ದೂರುಗಳು ಸುಳ್ಳಾಗಿದ್ದರೆ ಮುಖ್ಯಮಂತ್ರಿಗಳು ಮುಡಾ ನಿವೇಶನಗಳನ್ನು ಹಿಂತಿರುಗಿಸುತ್ತಿರಲಿಲ್ಲ ಮತ್ತು ಈ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರಲಿಲ್ಲ” ಎಂದು ಸವಾಲು ಹಾಕಿದ್ದಾರೆ. ಕೇವಲ ಹೇಳಿಕೆಗಳನ್ನು ನೀಡಿ ಕಾಲಹರಣ ಮಾಡುವುದು ನನ್ನ ಉದ್ದೇಶವಲ್ಲ, ಪ್ರತಿಯೊಂದು ವಿಚಾರಕ್ಕೂ ತಾರ್ಕಿಕ ಅಂತ್ಯ ಹಾಡುವುದೇ ನನ್ನ ಗುರಿ ಎಂದು ಮಟ್ಟಣ್ಣನವರ್‌ಗೆ ಟಾಂಗ್ ನೀಡಿದ್ದಾರೆ.

ಸೌಜನ್ಯ ಪ್ರಕರಣದ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ಈ ಪ್ರಕರಣದಲ್ಲಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವುದು ನನ್ನ ಪ್ರಮುಖ ಉದ್ದೇಶವಾಗಿದೆ. ಸರ್ಕಾರ ಕೂಡಲೇ ಸೌಜನ್ಯ ಪ್ರಕರಣದ ಮರು ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸೌಜನ್ಯ ಕೇಸ್‌ನಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬುದು ತಮ್ಮ ನಿಲುವಾಗಿದ್ದು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ.

ಇಬ್ಬರು ಪ್ರಬಲ ಹೋರಾಟಗಾರರ ನಡುವಿನ ಈ ತಿಕ್ಕಾಟವು ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಡಾ ಪ್ರಕರಣದ ಮೂಲಕ ಸರ್ಕಾರದ ನಿದ್ದೆಗೆಡಿಸಿದ್ದ ಸ್ನೇಹಮಯಿ ಕೃಷ್ಣ, ಈಗ ಸೌಜನ್ಯ ಪ್ರಕರಣದ ಅಂಗಳಕ್ಕೆ ಇಳಿದಿರುವುದು ರಾಜ್ಯ ರಾಜಕಾರಣದಲ್ಲಿ ಯಾವ ಹೊಸ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿಸಿದೆ.

Comments (0)

Your email address will not be published. Required fields are marked *

Back to top button