
ನವದೆಹಲಿ: ತುಮಕೂರಿನ ಸಿದ್ದಗಂಗಾ ಮಠದ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಶಿವಕುಮಾರ ಶ್ರೀಗಳನ್ನು ಕರುಣೆ, ವಿನಯ ಮತ್ತು ಮಾನವಕುಲದ ಮೇಲಿನ ಅಚಲ ಸೇವೆಯ ಪ್ರತಿರೂಪ ಎಂದು ಬಣ್ಣಿಸಿದ್ದಾರೆ. ಇತರರ ಉದ್ಧಾರಕ್ಕಾಗಿ ಸಮರ್ಪಿತವಾದ ಶ್ರೀಗಳ ಜೀವನವು, ನಿಜವಾದ ಮಹತ್ವವು ಸೇವೆಯಲ್ಲಿದೆ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಮೋದಿ ಸ್ಮರಿಸಿದ್ದಾರೆ.

ಶಿಕ್ಷಣ, ಸಾಮಾಜಿಕ ಕಲ್ಯಾಣ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಶ್ರೀಗಳು ನೀಡಿದ ಅಪಾರ ಕೊಡುಗೆಗಳು ಸಮಾಜದ ಮೇಲೆ ಶಾಶ್ವತವಾದ ಮುದ್ರೆ ಒತ್ತಿವೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ. ಇಂದಿಗೂ ಅವರ ಜೀವನದ ಹಾದಿಯು ಲಕ್ಷಾಂತರ ಜನರಿಗೆ ನಿಸ್ವಾರ್ಥ ಸೇವೆ ಮತ್ತು ಮಾನವೀಯತೆಯ ಮಾರ್ಗದಲ್ಲಿ ನಡೆಯಲು ದೊಡ್ಡ ಪ್ರೇರಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಗಳ ಜೊತೆಗಿರುವ ಹಳೆಯ ಭಾವಚಿತ್ರವನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿಯವರು “ನಡೆದಾಡುವ ದೇವರು” ಎಂದೇ ಖ್ಯಾತರಾದ ಸಿದ್ದಗಂಗಾ ಶ್ರೀಗಳಿಗೆ ಗೌರವ ಅರ್ಪಿಸಿದ್ದಾರೆ.




