Wednesday, August 20, 2025
18.9 C
Bengaluru
Google search engine
LIVE
ಮನೆ#Exclusive NewsTop Newsಸಚಿವ ಹೆಚ್​.ಸಿ ಮಹದೇವಪ್ಪ ಹೇಳಿಕೆಗೆ ಆರ್​. ಅಶೋಕ್​ ವಾಗ್ದಾಳಿ

ಸಚಿವ ಹೆಚ್​.ಸಿ ಮಹದೇವಪ್ಪ ಹೇಳಿಕೆಗೆ ಆರ್​. ಅಶೋಕ್​ ವಾಗ್ದಾಳಿ

ಬೆಂಗಳೂರು: ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಚಿವ ಹೆಚ್​.ಸಿ ಮಹದೇವಪ್ಪ ಹೇಳಿಕೆಗೆ ವಿಪಕ್ಷ ನಾಯಕ ಆರ್​. ಅಶೊಕ್​ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು KRS ಜಲಾಶಯಕ್ಕೆ ಮತಾಂಧ ಟಿಪ್ಪು ಸುಲ್ತಾನನ ಹೆಸರಿಟ್ಟು TS ಜಲಾಶಯ ಎಂದು ಮರುನಾಮಕರಣ ಮಾಡುವ ಹುನ್ನಾರ ನಡೆಯುತ್ತಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ನಾಡದ್ರೋಹಿ, ಮತಾಂಧ ಟಿಪ್ಪು ಸುಲ್ತಾನ ಸತ್ತಿದ್ದು 1799ರಲ್ಲಿ. ಮೈಸೂರು ಭಾಗದ ಗ್ರಾಮೀಣ ಜನರ ನಾಲಿಗೆಯ ಮೇಲೆ ಇಂದಿಗೂ ಕನ್ನಂಬಾಡಿ ಕಟ್ಟೆ ಎಂದೇ ಕರೆಸಿಕೊಳ್ಳುವ KRS ಜಲಾಶಯದ ಕಾಮಗಾರಿ ಪ್ರಾರಂಭವಾದದ್ದು 1911ರಲ್ಲಿ. 1799ರಲ್ಲಿ ಸತ್ತ ಮತಾಂಧ ಟಿಪ್ಪು ಸುಲ್ತಾನನಿಗೂ, ಅವನು ಸತ್ತ ಮೇಲೆ ಸರಿಸುಮಾರು 112 ವರ್ಷ ಆದಮೇಲೆ ಕಾಮಗಾರಿ ಪ್ರಾರಂಭವಾದ ಕನ್ನಂಬಾಡಿ ಕಟ್ಟೆಗೂ ಏನು ಸಂಬಂಧ ಸಚಿವ ಮಹದೇವಪ್ಪನವರೇ..? 

ನಿಮ್ಮ ಬಾಲಿಶ ಹೇಳಿಕೆ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎನ್ನುವಂತಾಗಿದೆ. ಇತಿಹಾಸ ಸ್ವಲ್ಪ ಓದಿಕೊಳ್ಳಿ. ಮದ್ರಾಸ್‌ನ ಬ್ರಿಟಿಷ್ ಪ್ರಾಂತೀಯ ಸರ್ಕಾರ ಒಪ್ಪಿಗೆ ನೀಡಿದ್ದು 80 ಅಡಿ ಎತ್ತರದ ಅಣೆಕಟ್ಟೆಗೆ. ಆದರೆ ಮಹಾರಾಜರು 124 ಅಡಿ ಎತ್ತರದ ಅಣೆಕಟ್ಟೆ ನಿರ್ಮಿಸುವ ಯೋಜನೆ ರೂಪಿಸಿದರು. ಪ್ರಾರಂಭಿಕ ಅಂದಾಜು ವೆಚ್ಚ 2 ಕೋಟಿ 35 ಲಕ್ಷ ರೂ. ಅಂದಿನ ರಾಜ್ಯದ ಆದಾಯವನ್ನೆಲ್ಲ ಇದೊಂದಕ್ಕೇ ಬಳಸುವುದು ಸಾಧ್ಯವಿರಲಿಲ್ಲ. ಆಗ ಕೃಷ್ಣರಾಜ ಒಡೆಯರ್ ಮತ್ತು ರಾಜಮಾತೆಯವರು ತೆಗೆದುಕೊಂಡ ತೀರ್ಮಾನ ಅಪೂರ್ವವಾದದ್ದು. ಅರಮನೆಯ ಖಾಸಗಿ ಭಂಡಾರದಲ್ಲಿದ್ದ ನಾಲ್ಕು ಮೂಟೆಗಳಷ್ಟು ವಜ್ರ, ವೈಢೂರ್ಯ, ಚಿನ್ನಾಭರಣಗಳು ಮತ್ತು ಬೆಳ್ಳಿ ನಾಣ್ಯಗಳನ್ನು ಮುಂಬಯಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬಂದ ಹಣವನ್ನು ಕನ್ನಂಬಾಡಿಯ ಕಟ್ಟೆ ನಿರ್ಮಾಣಕ್ಕೆ ವಿನಿಯೋಗಿಸಿದರು. ಕನ್ನಂಬಾಡಿ ಕಟ್ಟೆ ಎಂದೊಡನೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೆನಪಾಗುತ್ತಾರೆ. ಆದ್ದರಿಂದಲೇ ಕನ್ನಂಬಾಡಿ ಕಟ್ಟೆಗೆ ಕೃಷ್ಣರಾಜ ಸಾಗರ ಎಂಬ ಹೆಸರು ಇಡುವ ಮೂಲಕ ಅವರ ಹೆಸರನ್ನು ಸ್ಮರಿಸಲಾಗಿದೆ.

ಈಗ ರಾಜ್ಯ ಸರ್ಕಾರದ ವರಸೆ ನೋಡುತ್ತಿದ್ದರೆ ಕೆಆರ್​ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಹುನ್ನಾರ ನಡೆಯುತ್ತಿದೆ ಎನ್ನಿಸುತ್ತಿದೆ. ಇತ್ತೀಚೆಗಷ್ಟೇ ಸಿಎಂ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯನವರು  ನಾಲ್ವಡಿ ಅವರಿಗಿಂತ ದೊಡ್ಡವರು ಎನ್ನುವಂತೆ ಮಾತನಾಡಿ ನಾಲ್ವಡಿ ಅವರಿಗೆ ಅಪಮಾನ ಮಾಡಿದರು. ಈಗ ಸಿದ್ದರಾಮಯ್ಯನವರ ಆಪ್ತ ಸಚಿವ ಮಹದೇವಪ್ಪನವರು ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿದ್ದು ಮತಾಂಧ ಟಿಪ್ಪು ಸುಲ್ತಾನ ಎಂದು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಮತ್ತೊಮ್ಮೆ ಅಪಮಾನ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಆಪ್ತ ವಲಯದಿಂದ ಕೇಳಿಬರುತ್ತಿರುವ ಈ ಹೇಳಿಕೆಗಳನ್ನು ಗಮನಿಸಿದರೆ ಮೈಸೂರು ರಾಜಮನೆತನದ ತೇಜೋವಧೆ ಮಾಡುವ, ಆ ಮನೆತನದ ಗೌರವಕ್ಕೆ ಮಸಿ ಬಳಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಅನ್ನಿಸುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಆಧುನಿಕ ಮೈಸೂರಿನ ಮಹಾಶಿಲ್ಪಿ ಎಂದೇ ಅವರ ಹೆಸರು ಇತಿಹಾಸದಲ್ಲಿ ದಾಖಲಾಗಿದೆ. ಮೈಸೂರು ಸೀಮೆಯ ಜನರಿಗೆ ಅವರು ಇಂದಿಗೂ ಪ್ರಾತಃಸ್ಮರಣೀಯರು.

ಹಿಂದುಳಿದ ಜನಾಂಗಗಳು, ದಲಿತರು, ಬಡಬಗ್ಗರ ಬಗ್ಗೆ ಅಪಾರ ಕಾಳಜಿ ಇದ್ದ ಅವರ ಬಗ್ಗೆ ಮೈಸೂರು ಪ್ರಾಂತ್ಯದ ಜನರಿಗೆ ಈಗಲೂ ಅಪಾರ ಗೌರವ. ರೈತರ ಪಾಲಿಗೆ ಅವರು ಅನ್ನದಾತ. ಇಂತಹ ಮೇರು ವ್ಯಕ್ತಿತ್ವದ ನಾಲ್ವಡಿ ಅವರಿಗೆ ಮಸಿ ಬಳಿಯುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ. ಮೈಸೂರು ರಾಜಮನೆತನದ ತಂಟೆಗೆ ಬಂದ ಯಾರೂ ಇದುವರೆಗೂ ಉದ್ಧಾರ ಆಗಿಲ್ಲ. ಕಾಂಗ್ರೆಸ್ ನಾಯಕರು ಇದನ್ನ ನೆನಪಿಟ್ಟುಕೊಳ್ಳಬೇಕು. ತಮ್ಮ ಕ್ಷುಲ್ಲಕ ರಾಜಕೀಯಕ್ಕೆ ಮೈಸೂರು ರಾಜಮನೆತನದ ಹೆಸರನ್ನು ಪದೇ ಪದೇ ಎಳೆದು ತಂದು ಅಪಮಾನ ಮಾಡಿದರೆ ಈ ನಾಡಿನ ಜನತೆ ಸಹಿಸುವುದಿಲ್ಲ, ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು  ಎಚ್ಚರಿಕೆ ನೀಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments