ದೇಶ/ವಿದೇಶರಾಜ್ಯಸುದ್ದಿ

ಮೆಟ್ರೋ ಪಿಲ್ಲರ್ ಕುಸಿತ; ಆಟೋ, ಕಾರಿನ ಮೇಲೆ ಬಿದ್ದ ಸಿಮೆಂಟ್ ವಾಲ್

ಮುಂಬೈ: ಮುಲುಂಡ್ ಪಶ್ಚಿಮ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ನ ಒಂದು ಭಾಗ ಕುಸಿದು ಬಿದ್ದ ಭೀಕರ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮುಲುಂಡ್‌ ಪ್ರದೇಶದ ಜಾನ್ಸನ್ & ಜಾನ್ಸನ್ ಕಂಪನಿಯ ಬಳಿಯ ಎಲ್‌ಬಿಎಸ್ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ಮೆಟ್ರೋ ಕಂಬದ ಸಿಮೆಂಟ್ ಭಾಗವು ಏಕಾಏಕಿ ರಸ್ತೆಯ ಮೇಲೆ ಬಿದ್ದಿದೆ. ಈ ವೇಳೆ ಕೆಳಗೆ ಸಂಚರಿಸುತ್ತಿದ್ದ ಆಟೋ ರಿಕ್ಷಾ ಮತ್ತು ಕಾರಿನ ಮೇಲೆ ಸಿಮೆಂಟ್ ವಾಲ್ ಬಿದ್ದ ಪರಿಣಾಮ ಎರಡೂ ವಾಹನಗಳು ಸಂಪೂರ್ಣ ಅಪ್ಪಚ್ಚಿಯಾಗಿವೆ.

ಮಧ್ಯಾಹ್ನ ಸುಮಾರು 12:20ರ ಸುಮಾರಿಗೆ ಸಂಭವಿಸಿದ ಈ ಅಪಘಾತದಲ್ಲಿ, ಆಟೋ ರಿಕ್ಷಾದಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿದ ತಕ್ಷಣ ಮುಂಬೈ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಮತ್ತು ಮೆಟ್ರೋ ಪ್ರಾಧಿಕಾರದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನಾ ಸ್ಥಳದಲ್ಲಿ ಮೆಟ್ರೋ ಪಿಲ್ಲರ್‌ನ ಅವಶೇಷಗಳನ್ನು ತೆರವುಗೊಳಿಸಲಾಗಿದ್ದು, ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಅಪಘಾತಕ್ಕೆ ನಿಖರವಾದ ಕಾರಣವೇನು ಮತ್ತು ಮೆಟ್ರೋ ನಿರ್ಮಾಣದ ಸಮಯದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಮೆಟ್ರೋ ಕಾಮಗಾರಿಯ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಈ ಘಟನೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Comments (0)

Your email address will not be published. Required fields are marked *

Back to top button