
ಮೈಸೂರು: ಮೈಸೂರು-ಬೆಂಗಳೂರು ಹೆದ್ದಾರಿಯ ಸಮೀಪದಹಳೆ ಕೆಸರೆ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ಹಳೆ ವಸ್ತುಗಳನ್ನು ಸಂಗ್ರಹಿಸಿಡುವ ಗುಜರಿ ಗೋದಾಮುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಹನ್ನೆರಡಕ್ಕೂ ಹೆಚ್ಚು ಗೋದಾಮುಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಭಸ್ಮವಾಗಿವೆ.
ಬೆಳಗ್ಗೆ ಸುಮಾರು 3:30ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಗೋದಾಮುಗಳಿಗೆ ವ್ಯಾಪಿಸಿದೆ. ಸುಮಾರು 4:30ರ ವೇಳೆಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ನಿರಂತರವಾಗಿ ಹರಸಾಹಸ ಪಡುತ್ತಿದ್ದರೂ, ಗೋದಾಮುಗಳಲ್ಲಿ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ಹಳೆ ವಸ್ತುಗಳು ಇದ್ದ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು .
ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಬಂದಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವ ಪ್ರಯತ್ನ ಮಾಡಿದರು. ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾದ ಅಂದಾಜಿದೆ. ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಬೀಳಲು ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.




