
ಬೆಂಗಳೂರು: ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯ ಸಿದ್ದತೆಯ ಸಂಬಂಧ ಜೆಡಿಎಸ್ ನಗರ ಘಟಕದ ವತಿಯಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೆಂಗೇರಿ ಬಳಿಯ ಕೊಮ್ಮಘಟ್ಟದ ನೈಸ್ ರಸ್ತೆ ಬದಿ ನಡೆಯುವ ಈ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯ ಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯವ ಘಟದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಜೆಡಿಎಸ್ ಪಕ್ಷವು ಭರ್ಜರಿ ಕಸರತ್ತು ಆರಂಭಿಸಿದ್ದು, ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ದಳಪತಿಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಜೆಡಿಎಸ್ ಪಕ್ಷದ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿರುವ ಈ ಸಮಾವೇಶವು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುತ್ತಿದೆ. ಪಕ್ಷದ ಪರಮೋಚ್ಚ ನಾಯಕ ಹೆಚ್.ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ವಿಶೇಷವಾಗಿ ಮುಂಬರುವ ಜಿಬಿಎ (GBA) ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್ ನಾಯಕರು ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಪಕ್ಷದ ಹಿಡಿತವನ್ನು ಮರಳಿ ಪಡೆಯಲು ಮತ್ತು ನಗರ ಭಾಗದ ಮತದಾರರನ್ನು ಸೆಳೆಯಲು ಈ ಸಮಾವೇಶವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಪಕ್ಷದ ಹಿರಿಯ ಮತ್ತು ಯುವ ನಾಯಕರು ಒಗ್ಗೂಡಿ ಈ ಚುನಾವಣಾ ಕಣದಲ್ಲಿ ಮಿಂಚಲು ತಂತ್ರ ರೂಪಿಸುತ್ತಿದ್ದು, ಕೊಮ್ಮಘಟ್ಟದ ಈ ಶಕ್ತಿ ಪ್ರದರ್ಶನವು ವಿರೋಧ ಪಕ್ಷಗಳಿಗೂ ನೇರ ಸಂದೇಶ ರವಾನಿಸುವಂತಿದೆ. ಬೆಳ್ಳಿ ಹಬ್ಬದ ಈ ಸಂಭ್ರಮವು ಪಕ್ಷದ ಮುಂದಿನ ರಾಜಕೀಯ ಹಾದಿಗೆ ದಿಕ್ಸೂಚಿಯಾಗುವ ಸಾಧ್ಯತೆಯಿದೆ.




