ಜಿಲ್ಲೆರಾಜ್ಯಸುದ್ದಿ

ಬಿಎಂಟಿಸಿ ಕಿಲ್ಲರ್ ಬಸ್ ಗೆ ಮಣಿಪುರ ಯುವತಿ ಬಲಿ; ತಲೆ ಮೇಲೆ ಹರಿದ ಬಸ್ ಚಕ್ರ


ಬೆಂಗಳೂರು : ರಸ್ತೆಗಳಲ್ಲಿ ಬಿಎಂಟಿಸಿ ಬಸ್‌ಗಳ ಅತಿವೇಗ ಮತ್ತು ಅಜಾಗರೂಕ ಚಾಲನೆಯು ಸಾರ್ವಜನಿಕರ ಪಾಲಿಗೆ ಸಂಚಕಾರವಾಗಿ ಪರಿಣಮಿಸುತ್ತಿದ್ದು, ಈಗ ಮತ್ತೊಂದು ಭೀಕರ ಅಪಘಾತಕ್ಕೆ ಎಳೆಯ ಜೀವವೊಂದು ಬಲಿಯಾಗಿದೆ. ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಬಳಿ ನಡೆದ ಈ ಭೀಕರ ಘಟನೆಯಲ್ಲಿ ಮಣಿಪುರ ಮೂಲದ 20 ವರ್ಷದ ಹನ್ನಾ ಇನಕಾ ಎಂಬ ಯುವತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಈಗ ಲಭ್ಯವಾಗಿದ್ದು, ನೋಡುಗರ ಮೈ ಜುಮ್ಮೆನಿಸುವಂತಿದೆ.

ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿ ಕಡೆಗೆ ಸಂಚರಿಸುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್, ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಬೈಕ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಹನ್ನಾ ಇನಕಾ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದುರಂತವೆಂದರೆ, ಬಿದ್ದ ತಕ್ಷಣವೇ ವೇಗವಾಗಿ ಬಂದ ಬಸ್ಸಿನ ಮುಂಭಾಗದ ಚಕ್ರವು ಆಕೆಯ ತಲೆಯ ಮೇಲೆಯೇ ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ತಕ್ಷಣವೇ ಕೆ.ಆರ್. ಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ
ಕೊನೆಯುಸಿರೆಳೆದಿದ್ದಾರೆ.

ಮೃತ ಯುವತಿ ಹನ್ನಾ ಇನಕಾ ಮೂಲತಃ ಮಣಿಪುರದವರಾಗಿದ್ದು, ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಬೆಂಗಳೂರಿಗೆ ಬಂದು ಮಾರತಳ್ಳಿಯಲ್ಲಿ ವಾಸವಿದ್ದರು. ಇಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಹೀಗೆ ಅಕಾಲಿಕ ಮರಣಕ್ಕೀಡಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೆ.ಆರ್. ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಯುತ್ತಿದೆ. ಚಾಲಕರ ಈ ಅಜಾಗರೂಕತೆಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

Comments (0)

Your email address will not be published. Required fields are marked *

Back to top button