
ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರು ತಮ್ಮ ವಾಹನಗಳ ಫಾಸ್ಟ್ಯಾಗ್ (FASTag) ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ. ಯಾಕೆಂದರೆ, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಎಲ್ಲಾ ಹೆದ್ದಾರಿ ಟೋಲ್ಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇನ್ನು ಮುಂದೆ ನಿಮ್ಮ ಜೇಬಿನಲ್ಲಿ ಎಷ್ಟೇ ಹಣವಿದ್ದರೂ, ಫಾಸ್ಟ್ಯಾಗ್ ಸಕ್ರಿಯವಾಗಿಲ್ಲದಿದ್ದರೆ ಅಥವಾ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೆ ಹೆದ್ದಾರಿ ಪ್ರವೇಶಕ್ಕೆ ತಡೆಯೊಡ್ಡಲಾಗುತ್ತದೆ. ಸುಗಮ ಮತ್ತು ವೇಗದ ಪ್ರಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಠಿಣ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಕೇವಲ ಫಾಸ್ಟ್ಯಾಗ್ ಮತ್ತು ಯುಪಿಐ (UPI) ಮೂಲಕ ಮಾತ್ರ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು-ತುಮಕೂರು-ಪುಣೆ ಹಾಗೂ ನೆಲಮಂಗಲ-ಹಾಸನ ಹೆದ್ದಾರಿ ಸೇರಿದಂತೆ ಪ್ರಮುಖ ಟೋಲ್ಗಳಲ್ಲಿ ಈಗಾಗಲೇ ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ವಿಶೇಷವೆಂದರೆ, ಫಾಸ್ಟ್ಯಾಗ್ ಇಲ್ಲದ ವಾಹನಗಳ ಸಂಖ್ಯೆಯನ್ನು ಮ್ಯಾನುಯಲ್ ಆಗಿ ನಮೂದಿಸಿ ಹಣ ಪಡೆಯುವ ವ್ಯವಸ್ಥೆಯನ್ನೂ ರದ್ದುಗೊಳಿಸಲಾಗಿದ್ದು, ಕೇವಲ ಆಟೋಮ್ಯಾಟಿಕ್ ರೀಡರ್ಗಳ ಮೂಲಕ ಮಾತ್ರ ಸ್ಕ್ಯಾನ್ ಮಾಡಿ ಹಣ ಕಡಿತಗೊಳಿಸಲಾಗುತ್ತದೆ. ಆದ್ದರಿಂದ ವಾಹನ ಸವಾರರು ಪ್ರಯಾಣ ಬೆಳೆಸುವ ಮುನ್ನ ತಮ್ಮ ಫಾಸ್ಟ್ಯಾಗ್ ಕೆವೈಸಿ (KYC) ಪೂರ್ಣಗೊಂಡಿದೆಯೇ ಮತ್ತು ಅದರಲ್ಲಿ ಸಾಕಷ್ಟು ಬ್ಯಾಲೆನ್ಸ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ಹೊಸ ಬದಲಾವಣೆಯು ಟೋಲ್ ಪ್ಲಾಜಾಗಳಲ್ಲಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.




