ಕೋಲಾರ: ಮಗಳ ಪ್ರೀತಿಯ ಹಠದಿಂದ ತಾಯಿ ಆತ್ಮಹತ್ಯೆಗೆ ಯತ್ನಿಸಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ.
ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಯುವತಿಯೊಬ್ಬಳು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದು, ಇದಕ್ಕೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಮಗಳು ತನ್ನ ನಿರ್ಧಾರದಿಂದ ಹಿಂದೆ ಸರಿಯದ ಕಾರಣ ಮನನೊಂದ ತಾಯಿ ಜಯಲಕ್ಷ್ಮಿ ಅವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ತಾಯಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಕೋಲಾರದಲ್ಲಿ ಲವ್ ಜಿಹಾದ್ ಆರೋಪ
ತಾಯಿ ಆಸ್ಪತ್ರೆ ಪಾಲಾಗಿದ್ದರೂ ಯುವತಿ ಮಾತ್ರ ತನ್ನ ಪಟ್ಟು ಬಿಟ್ಟಿಲ್ಲ. ಕಳೆದ ಎಂಟು ದಿನಗಳಿಂದ ಸಂಬಂಧಿಕರ ಮನೆಯಲ್ಲಿ ಬಾಗಿಲು ಹಾಕಿಕೊಂಡು ಯುವಕನ ಪರವಾಗಿಯೇ ಹಠ ಹಿಡಿದಿದ್ದಾಳೆ. ಹೆತ್ತ ತಾಯಿ ಸಾವಿನ ದವಡೆಯಲ್ಲಿದ್ದರೂ ಮಗಳು ಕನಿಕರ ತೋರುತ್ತಿಲ್ಲ ಎಂದು ಆಕೆಯ ಸಹೋದರಿ ಕಣ್ಣೀರು ಹಾಕಿದ್ದಾರೆ. ಈ ನಡುವೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಯುವತಿಯನ್ನು ಠಾಣೆಗೆ ಕರೆತಂದಿದ್ದಾರೆ. ಈ ಪ್ರಕರಣವು ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ನಾಯಕರು ಇದೊಂದು ‘ಲವ್ ಜಿಹಾದ್’ ಎಂದು ಆರೋಪಿಸಿದ್ದಾರೆ.


