ಸಿನಿಮಾ

ಲವ್ ಮಾಕ್ಟೇಲ್ 3’ ‘ಒಬ್ಬಂಟಿಯಾದೆ ನಾ’ ಹಾಡು; ಏಪ್ರಿಲ್ 10ಕ್ಕೆ ಆದಿ ಕಹಾನಿ ರಿಲೀಸ್!

ಸ್ಯಾಂಡಲ್‌ವುಡ್‌ನ ಯಶಸ್ವಿ ಸಿನಿಮಾ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಈಗ ಮೂರನೇ ಭಾಗದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ‘ಲವ್ ಮಾಕ್ಟೇಲ್ 3’ ಸಿನಿಮಾದ ಬಹುನಿರೀಕ್ಷಿತ ‘ಒಬ್ಬಂಟಿಯಾದೆ ನಾ’ ಹಾಡಿನ ಲಿರಿಕಲ್ ವೀಡಿಯೋ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪ್ರೇಮಿಗಳ ಮನ ಗೆಲ್ಲುತ್ತಿದೆ. ಈ ವಿರಹ ಗೀತೆಗೆ ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿ ಅವರೇ ಧ್ವನಿ ನೀಡಿದ್ದಾರೆ. ರಾಘವೇಂದ್ರ ಕಾಮತ್ ಅವರ ಸಾಹಿತ್ಯವು ಹಾಡಿಗೆ ಆಳವಾದ ಭಾವನೆಯನ್ನು ತುಂಬಿದೆ.

ನಟ ಡಾರ್ಲಿಂಗ್ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಮೊದಲ ಎರಡು ಭಾಗಗಳ ಯಶಸ್ಸಿನಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸಿದ್ದವು, ಅದೇ ಹಾದಿಯಲ್ಲಿ ಈಗ ಮೂರನೇ ಭಾಗದ ಹಾಡುಗಳು ಕೂಡ ಬಿಡುಗಡೆಯಾದ ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ವಿಶೇಷವಾಗಿ ಪ್ರೇಮಿಗಳ ದಿನದ ಅಂಗವಾಗಿ ಬಿಡುಗಡೆಯಾದ ‘ಒಬ್ಬಂಟಿಯಾದೆ ನಾ’ ಹಾಡಿಗೆ ಅಭಿಮಾನಿಗಳಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಕ್ರಿಸ್‌ಮಿ’ ಬ್ಯಾನರ್ ಅಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್, ಮಿಲನಾ ನಾಗರಾಜ್, ಸಂವೃತಾ ಹಾಗೂ ರೇಚಲ್ ಡೇವಿಡ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈಗಾಗಲೇ ತಂದೆ-ಮಗಳ ಬಾಂಧವ್ಯದ ಹಾಡು ಹಿಟ್ ಆಗಿದ್ದು, ಈಗ ವಿರಹ ಗೀತೆಯು ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ‘ಲವ್ ಮಾಕ್ಟೇಲ್ 3’ ಏಪ್ರಿಲ್ 10ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಆದಿ ಮತ್ತು ಅವನ ಜೀವನದ ಹೊಸ ಪಯಣ ಹೇಗಿರಲಿದೆ ಎಂಬುದನ್ನು ನೋಡಲು ಸಿನಿಮಾ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button