Sports

ವದಂತಿ ಹಬ್ಬಿಸಿದವರಿಗೆ ಕಿಂಗ್ ವಿರಾಟ್ ನೀಡಿದ ಮಸ್ತ್ ಟಾಂಗ್!

ಐಪಿಎಲ್ 2026ರ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ವದಂತಿಯನ್ನು ಅತ್ಯಂತ ಚತುರತೆಯಿಂದ ಸದ್ದಡಗಿಸಿದ್ದಾರೆ. ಲಂಡನ್ ಪ್ರವಾಸಕ್ಕಾಗಿ ವಿಶೇಷ ವಿಮಾನದ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಯನ್ನು ಕೇವಲ ಎರಡು ಎಮೋಜಿಗಳ ಮೂಲಕ ‘ಫೇಕ್’ ಎಂದು ಸಾರಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮುಂದೆ ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಐಪಿಎಲ್ ಪಂದ್ಯಗಳ ನಡುವೆ 3 ದಿನಗಳ ಬಿಡುವು ಸಿಕ್ಕರೆ ಲಂಡನ್‌ಗೆ ಹೋಗಿ ಬರಲು ತಮಗೆ ‘ಚಾರ್ಟರ್ಡ್ ಫ್ಲೈಟ್’ ವ್ಯವಸ್ಥೆ ಮಾಡಬೇಕು ಎಂದು ಕೊಹ್ಲಿ ಷರತ್ತು ವಿಧಿಸಿದ್ದಾರೆ ಎಂಬುದು ಈ ಸುದ್ದಿಯ ಸಾರವಾಗಿತ್ತು. ಆದರೆ, ಈ ಸುದ್ದಿಯ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ವಿರಾಟ್, ಅದರ ಮೇಲೆ ಎರಡು ನಗುವ ಎಮೋಜಿಗಳನ್ನು ಹಾಕುವ ಮೂಲಕ ಇದು ಸಂಪೂರ್ಣ ಸುಳ್ಳು ಮತ್ತು ಹಾಸ್ಯಾಸ್ಪದ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ ರನ್ ಗಳಿಸುವುದಷ್ಟೇ ಅಲ್ಲ, ಕ್ರಿಕೆಟ್ ಇತಿಹಾಸದ ಕೆಲವು ಅಪರೂಪದ ದಾಖಲೆಗಳನ್ನು ಬರೆಯುವ ಹೊಸ್ತಿಲಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 9,000 ರನ್ ಪೂರೈಸಿದ ಮೊದಲ ಆಟಗಾರನಾಗಲು ಕೊಹ್ಲಿಗೆ ಇನ್ನು ಕೇವಲ 339 ರನ್‌ಗಳ ಅವಶ್ಯಕತೆಯಿದೆ. ಪ್ರಸ್ತುತ ಅವರು 267 ಪಂದ್ಯಗಳಿಂದ 8,661 ರನ್ ಗಳಿಸಿದ್ದಾರೆ. ಅಲ್ಲದೆ, ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಎರಡನ್ನೂ ಸೇರಿ ಆರ್‌ಸಿಬಿ ಪರ ಕೊಹ್ಲಿ ಇದುವರೆಗೆ 9,085 ರನ್ ಗಳಿಸಿದ್ದು, ಇನ್ನು 915 ರನ್ ಗಳಿಸಿದರೆ, ವಿಶ್ವದ ಯಾವುದೇ ಟಿ20 ಫ್ರಾಂಚೈಸಿ ಪರ 10,000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸಮಗ್ರ ಟಿ20 ಕ್ರಿಕೆಟ್‌ನಲ್ಲಿ 13,543 ರನ್ ಗಳಿಸಿರುವ ಕೊಹ್ಲಿ, ಇನ್ನು 457 ರನ್ ಗಳಿಸಿದರೆ ಕ್ರಿಸ್ ಗೇಲ್ ಮತ್ತು ಕೀರನ್ ಪೊಲಾರ್ಡ್ ಅಂತಹ ದಿಗ್ಗಜರ ಸಾಲಿಗೆ ಅಂದರೆ 14,000 ರನ್ ಕ್ಲಬ್‌ಗೆ ಸೇರಲಿದ್ದಾರೆ. ಐಪಿಎಲ್ 2026ರ ಮೊದಲ ಪಂದ್ಯವು ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ಸ್ ಆರ್‌ಸಿಬಿ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡುವ ಮೂಲಕ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಹೋರಾಟ ಆರಂಭಿಸಲಿದೆ. ಕಳೆದ ಸೀಸನ್‌ನಲ್ಲಿ 15 ಇನ್ನಿಂಗ್ಸ್‌ಗಳಿಂದ 657 ರನ್ ಸಿಡಿಸಿದ್ದ ವಿರಾಟ್, ಈ ಬಾರಿಯೂ ಅದೇ ಫಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

Comments (0)

Your email address will not be published. Required fields are marked *

Back to top button