bengaluruಕ್ರಿಕೆಟ್ರಾಜ್ಯಸುದ್ದಿ

ಆನೇಕಲ್‌ನಲ್ಲಿ 80,000 ಸಾಮರ್ಥ್ಯದ ಕ್ರೀಡಾ ಸಂಕೀರ್ಣಕ್ಕೆ ಕೆಎಚ್‌ಬಿ ಚಾಲನೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಮತ್ತು ನಗರದ ಕ್ರೀಡಾ ಮೂಲಸೌಕರ್ಯವನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಆನೇಕಲ್ ತಾಲೂಕಿನ ಇಂಡ್ಲವಾಡಿಯಲ್ಲಿ ಬೃಹತ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕರ್ನಾಟಕ ಗೃಹ ಮಂಡಳಿ (KHB) ಅಧಿಕೃತವಾಗಿ ಚಾಲನೆ ನೀಡಿದೆ. ಸೂರ್ಯ ನಗರ 4ನೇ ಹಂತದ ಬಡಾವಣೆಯ ಸುಮಾರು 75 ಎಕರೆ ಪ್ರದೇಶದಲ್ಲಿ ಈ ಕ್ರೀಡಾ ಸಂಕೀರ್ಣ ತಲೆ ಎತ್ತಲಿದ್ದು, ಮೊದಲ ಹಂತದಲ್ಲಿ 943.46 ಕೋಟಿ ರೂ. ವೆಚ್ಚದಲ್ಲಿ 80,000 ಆಸನ ಸಾಮರ್ಥ್ಯದ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ.

ಈ ಯೋಜನೆಯು ಕೇವಲ ಕ್ರಿಕೆಟ್‌ಗೆ ಸೀಮಿತವಾಗಿರದೆ, ಭವಿಷ್ಯದಲ್ಲಿ ಬ್ಯಾಡ್ಮಿಂಟನ್, ಟೆನ್ನಿಸ್, ಅಥ್ಲೆಟಿಕ್ಸ್, ಕಬಡ್ಡಿ ಸೇರಿದಂತೆ ಎಲ್ಲಾ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಅನುಕೂಲವಾಗುವಂತೆ ‘ಅಂತಾರಾಷ್ಟ್ರೀಯ ಬಹುಕ್ರೀಡಾ ಸಮುಚ್ಚಯ’ವಾಗಿ ಮಾರ್ಪಡಲಿದೆ. ಆರಂಭದಲ್ಲಿ ಈ ಇಡೀ ಸಮುಚ್ಚಯವನ್ನು 1,980 ಕೋಟಿ ರೂ. ವೆಚ್ಚದಲ್ಲಿ ಒಂದೇ ಹಂತದಲ್ಲಿ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಕಾಮಗಾರಿ ವಿಳಂಬವಾಗಬಾರದು ಎಂಬ ಕಾರಣಕ್ಕೆ, ಈಗ ಮೊದಲ ಹಂತದಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಆದ್ಯತೆ ನೀಡಲಾಗಿದೆ. ಯೋಜನೆಯು ಎಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್ ಮತ್ತು ಕನ್ಸ್‌ಟ್ರಕ್ಷನ್ (EPC Mode) ಅಡಿಯಲ್ಲಿ ನಡೆಯಲಿದ್ದು, ಆಯ್ಕೆಯಾದ ಗುತ್ತಿಗೆ ಸಂಸ್ಥೆಯೇ ಸಂಪೂರ್ಣ ವಿನ್ಯಾಸ ಮತ್ತು ನಿರ್ಮಾಣದ ಜವಾಬ್ದಾರಿ ಹೊರಲಿದೆ.

ಈ ಕ್ರೀಡಾ ಗ್ರಾಮದಲ್ಲಿ ಕ್ರೀಡಾಪಟುಗಳಿಗೆ ವಸತಿ, ಜಿಮ್, ಈಜುಕೊಳ, ಹಾಸ್ಟೆಲ್ ಮತ್ತು ಅತಿಥಿ ಗೃಹಗಳಂತಹ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರಲಿವೆ. ಭವಿಷ್ಯದಲ್ಲಿ ಈ ಯೋಜನೆಯನ್ನು 300 ಎಕರೆವರೆಗೆ ವಿಸ್ತರಿಸುವ ಗುರಿಯನ್ನು ಕೆಎಚ್‌ಬಿ ಹೊಂದಿದ್ದು, ಒಟ್ಟು ಯೋಜನಾ ವೆಚ್ಚವು 2,500 ಕೋಟಿ ರೂ. ದಾಟುವ ಸಾಧ್ಯತೆಯಿದೆ. ಆನೇಕಲ್ ಭಾಗದಲ್ಲಿ ಈ ಮಟ್ಟದ ಬೃಹತ್ ಕ್ರೀಡಾ ಕೇಂದ್ರ ನಿರ್ಮಾಣವಾಗುತ್ತಿರುವುದು ಸ್ಥಳೀಯ ಆರ್ಥಿಕತೆ ಮತ್ತು ಕ್ರೀಡಾ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

Comments (0)

Your email address will not be published. Required fields are marked *

Back to top button