ಜಿಲ್ಲೆಸುದ್ದಿ

ಪಿಲಿಕುಳ ಮೃಗಾಲಯದಲ್ಲಿ ‘ಕಾಳಿಂಗ’ ಹಗರಣ; 2 ಕೋಟಿ ಅನುದಾನ ಲೂಟಿ ಆರೋಪ’

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿ ಮತ್ತು ನಿರ್ವಹಣೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ಕೆಲವು ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿರುವ ಈ ಮೃಗಾಲಯದ ಸ್ಥಿತಿಯ ಬಗ್ಗೆ ಈಗಾಗಲೇ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ, ಕಾಳಿಂಗ ಸರ್ಪಗಳ ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿ ಅವುಗಳ ಸಾವಿಗೆ ಕಾರಣರಾಗಿರುವ ಮತ್ತು ಅನುದಾನ ದುರುಪಯೋಗಪಡಿಸಿಕೊಂಡಿರುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

2022ರ ಜುಲೈನಲ್ಲಿ 38 ಕಾಳಿಂಗ ಸರ್ಪದ ಮರಿಗಳು ಮೊಟ್ಟೆಯೊಡೆದು ಹೊರಬಂದಿದ್ದವು ಎಂದು ಅಬ್ಬರದಿಂದ ಪ್ರಚಾರ ಮಾಡಲಾಗಿತ್ತು. ಆದರೆ, ಪ್ರಸ್ತುತ ಆ ಮರಿಗಳು ಎಲ್ಲಿವೆ ಎಂಬ ಬಗ್ಗೆ ಆಡಳಿತ ಮಂಡಳಿಯ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಮರಿಗಳನ್ನು ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಅಧಿಕಾರಿಗಳು ಸಮರ್ಥನೆ ನೀಡುತ್ತಿದ್ದಾರೆಯೂ, ಅರಣ್ಯ ಇಲಾಖೆಯಿಂದ ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂಬುದು ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ. ದಾಖಲೆಗಳ ಪ್ರಕಾರ ಕೇವಲ 22 ಮರಿಗಳ ಉಲ್ಲೇಖವಿದ್ದು, ಅವು ಕೂಡ ಮೂರು ತಿಂಗಳೊಳಗೆ ಮೃತಪಟ್ಟಿವೆ ಎಂಬ ಮಾಹಿತಿ ಹೊರಬಿದ್ದಿದೆ.

ಕಾಳಿಂಗ ಸರ್ಪ ಸಂತಾನಾಭಿವೃದ್ಧಿ ಕೇಂದ್ರದ ಹೆಸರಿನಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯಿಂದ 2 ಕೋಟಿ ರೂಪಾಯಿಗೂ ಅಧಿಕ ಅನುದಾನ ಪಡೆಯಲಾಗಿದೆ. ಆದರೆ ಈ ಹಣ ಹಾವಿನ ಮರಿಗಳ ಪಾಲನೆಗೆ ಬಳಕೆಯಾಗಿಲ್ಲ ಎಂಬ ಆರೋಪವಿದೆ. ಹಾವುಗಳಿಗೆ ಆಹಾರ ಪೂರೈಸಿದ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಅಕ್ರಮ ಎಸಗಲಾಗಿದೆ ಎಂದು ದೂರಲಾಗಿದೆ. ಮಾಂಸದ ವ್ಯಾಪಾರಿಯ ಹೆಸರಿನಲ್ಲಿ ಹಣ ಪಡೆದು, ‘ಸ್ನೇಕ್ ಫೀಡ್’ ಎಂದು ತೋರಿಸಿ ಕೇರೆ ಹಾವುಗಳನ್ನು ಪೂರೈಸಿರುವ ಸಂಶಯ ವ್ಯಕ್ತವಾಗಿದೆ.

ಈ ಎಲ್ಲಾ ಅಕ್ರಮಗಳ ಕುರಿತು ವನ್ಯಜೀವಿ ಸಂರಕ್ಷಕ ಭುವನ್ ಎಂಬುವವರು ವೈಲ್ಡ್‌ಲೈಫ್ ಕ್ರೈಮ್ ಕಂಟ್ರೋಲ್ ಬ್ಯೂರೋಗೆ ದೂರು ನೀಡಿದ್ದಾರೆ. ಪಿಲಿಕುಳದ ಅವ್ಯವಸ್ಥೆಯ ಬಗ್ಗೆ ಈಗಾಗಲೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಕಾಳಿಂಗ ಸರ್ಪಗಳ ಸಾವಿನ ಈ ಹೊಸ ಹಗರಣವನ್ನು ನ್ಯಾಯಾಲಯದ ಗಮನಕ್ಕೆ ತರಲು ನಿರ್ಧರಿಸಲಾಗಿದೆ. ಈ ಬೆಳವಣಿಗೆಯಿಂದಾಗಿ ಪಿಲಿಕುಳ ಮೃಗಾಲಯದ ಆಡಳಿತ ಮಂಡಳಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.

Comments (0)

Your email address will not be published. Required fields are marked *

Back to top button