ಕಲಬುರಗಿ: ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ಕಡಗಂಚಿಯ ಕೇಂದ್ರಿಯ ವಿಶ್ವ ವಿದ್ಯಾಲಯದಲ್ಲಿಇದೀಗ ಮತ್ತೊಂದು ವಿವಾದ ಭುಗಿಲೆದ್ದಿದೆ. ವಸಂತ ಪಂಚಮಿ ನಿಮಿತ್ತ ಕೆಲವು ವಿದ್ಯಾರ್ಥಿಗಳು ಬುಧವಾರ ಕೇಂದ್ರೀಯ ವಿವಿಯ ಗ್ರಂಥಾಲಯದಲ್ಲಿ ಸರಸ್ವತಿಯ ಪೂಜೆ ನಡೆಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ವಿದ್ಯಾರ್ಥಿಗಳು ಇನ್ನೊಂದು ಗುಂಪು ಸರಸ್ವತಿ ಪೂಜೆಗೆ ಅಡ್ಡಿ ಮಾಡಿದೆ. ಅಲ್ಲದೆ ಪೂಜೆ ಮಾಡುತ್ತಿದ್ದ ಕೇಂದ್ರೀಯ ವಿವಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಪೂಜೆ ವೇಳೆ ಮಧ್ಯ ಪ್ರವೇಶ ಮಾಡಿದ ವಿದ್ಯಾರ್ಥಿಯೊಂದಿಗೆ ವಿವಿ ಅಧಿಕಾರಿ ವಾಗ್ವಾದ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ವಿಶ್ವವಿದ್ಯಾಲಯದಲ್ಲಿ ಸರಸ್ವತಿ ಪೂಜೆ ಯಾಕೆ ಮಾಡ್ತೀರಾ’, ‘ಇದೇನು ವಿವಿ ನಾ ಅಥವಾ ದೇವಸ್ಥಾನವೇ’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಧಿಕಾರಿ ಇಂದು ‘ವಸಂತ ಪಂಚಮಿ ನಿಮಿತ್ತ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿದ್ದಾರೆ’ ಎಂದು ಉತ್ತರಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿ ‘ವಿದ್ಯಾರ್ಥಿಗಳು ಪೂಜೆ ಮಾಡಿದ್ರೆ ಅಧಿಕಾರಿಗಳು ಯಾಕೆ ಪಾಲ್ಗೊಂಡಿದ್ದೀರಿ’, ‘ಮನೆಯಲ್ಲಿ ಬೇಕಿದ್ರೆ ಪೂಜೆ ಮಾಡಿಕೊಳ್ಳಬೇಕು, ಇಲ್ಲಿ ಅದೆಲ್ಲ ಮಾಡುವಂತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನೀವು ಏನೇ ಕೇಳುವುದಿದ್ದರೂ ಮೇಲಧಿಕಾರಿಗಳಿಗೆ ಕೇಳಿ’ ಎಂದು ಅಧಿಕಾರಿ ಹೇಳುವುದು ವಿಡಿಯೋದಲ್ಲಿದೆ. ಇದಾದ ನಂತರ ಎರಡು ವಿಚಾರಧಾರೆಯ ವಿದ್ಯಾರ್ಥಿಗಳು ಗುಂಪಾಗಿ ವಾಗ್ವಾದ ನಡೆಸಿದ್ದಾರೆ. ಪರಿಸ್ಥಿಯ ಕೈ ಬಿಗಡಾಯಿಸುವುದಕ್ಕೆ ಮುನ್ನ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ಆಗಮಿಸಿ ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ ಎನ್ನಲಾಗುತ್ತಿದೆ.