ಜಿಲ್ಲೆರಾಜ್ಯವೈರಲ್ ನ್ಯೂಸ್ಸುದ್ದಿ

ಬಿಎಂಟಿಸಿ ಸಿಬ್ಬಂದಿ ಅಪ್ಪಟ ಚಿನ್ನ; ಬಸ್‌ನಲ್ಲಿ ಮರೆತಿದ್ದ ಒಡವೆ ಮಾಲೀಕರಿಗೆ ವಾಪಸ್

ಬೆಂಗಳೂರು : ಬಿಎಂಟಿಸಿ ಬಸ್ ಸಿಬ್ಬಂದಿಯೊಬ್ಬರು ಅಪ್ಪಟ ಪ್ರಾಮಾಣಿಕತೆ ಮೆರೆದಿದ್ದು, ಬಸ್‌ನಲ್ಲಿ ಕಳೆದುಹೋಗಿದ್ದ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಇಂದಿನ ದಿನಗಳಲ್ಲಿ ಹಣದ ಆಸೆಗೆ ಬಿದ್ದು ಜನ ದಾರಿ ತಪ್ಪುತ್ತಿರುವಾಗ, ಬಿಎಂಟಿಸಿ ಸಿಬ್ಬಂದಿಯ ಈ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ವ್ಯಕ್ತವಾಗಿದೆ.
ಜನವರಿ 31 ರಂದು ಕೆ.ಆರ್. ಮಾರ್ಕೆಟ್‌ನಿಂದ ಪದ್ಮನಾಭ ನಗರಕ್ಕೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಕೆ.ಆರ್. ಮಾರ್ಕೆಟ್‌ನಲ್ಲಿ ಬಸ್ ಹತ್ತಿದ್ದ ಮಹಿಳೆಯೊಬ್ಬರು, ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಮರೆತು ಬಸವನಗುಡಿಯಲ್ಲಿ ಇಳಿದಿದ್ದರು. ಬಸ್‌ನಲ್ಲಿ ಭಾರಿ ಜನದಟ್ಟಣೆ ಇದ್ದ ಕಾರಣ ಆರಂಭದಲ್ಲಿ ಸಿಬ್ಬಂದಿಯ ಗಮನಕ್ಕೆ ಬ್ಯಾಗ್ ಬಂದಿರಲಿಲ್ಲ. ನಂತರ ಬ್ಯಾಗ್ ಕಳೆದುಕೊಂಡ ಮಹಿಳೆ ಗಾಬರಿಯಿಂದ ಬಿಎಂಟಿಸಿ ಕೇಂದ್ರ ಕಚೇರಿಗೆ ಕರೆ ಮಾಡಿ ದೂರು ನೀಡಿದ್ದರು.

ಮಹಿಳೆಯ ಬಳಿ ಇದ್ದ ಟಿಕೆಟ್ ಆಧಾರದ ಮೇಲೆ ಬಸ್ ಸಂಖ್ಯೆಯನ್ನು ಪತ್ತೆಹಚ್ಚಿದ ಅಧಿಕಾರಿಗಳು ತಕ್ಷಣವೇ ಬಸ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ತಪಾಸಣೆ ನಡೆಸಿದಾಗ ಬ್ಯಾಗ್ ಸುರಕ್ಷಿತವಾಗಿ ಬಸ್‌ನಲ್ಲಿರುವುದು ಪತ್ತೆಯಾಗಿದೆ. ಕಳೆದುಹೋಗಿದ್ದ ಬ್ಯಾಗ್ ಮತ್ತೆ ಸಿಕ್ಕಿದಾಗ ಮಹಿಳೆ ಬಿಕ್ಕಿ ಬಿಕ್ಕಿ ಅತ್ತಿದ್ದು, ತಮ್ಮ ಜೀವನದ ಉಳಿತಾಯವನ್ನು ಮರಳಿ ನೀಡಿದ ಬಿಎಂಟಿಸಿ ಸಿಬ್ಬಂದಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Comments (0)

Your email address will not be published. Required fields are marked *

Back to top button