ರಾಜಕೀಯರಾಜ್ಯಸುದ್ದಿ

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಜೆಡಿಎಸ್ ಕೆಂಡ!

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮವನ್ನು ಜೆಡಿಎಸ್ ತೀವ್ರವಾಗಿ ಖಂಡಿಸಿದೆ. ಇದು ಸಿದ್ದರಾಮಯ್ಯ ಸರ್ಕಾರದ ಹೇಡಿತನದ ಪರಮಾವಧಿ ಎಂದು ಬಣ್ಣಿಸಿರುವ ಜೆಡಿಎಸ್, ಭ್ರಷ್ಟಾಚಾರವನ್ನು ಪ್ರಶ್ನಿಸುವ ಪತ್ರಕರ್ತರನ್ನು ಕಂಡರೆ ಕಾಂಗ್ರೆಸ್ ಸರ್ಕಾರಕ್ಕೆ ನಡುಕ ಶುರುವಾಗಿದೆ ಎಂದು ವ್ಯಂಗ್ಯವಾಡಿದೆ. ಸಚಿವರು ಮತ್ತು ಶಾಸಕರ ಅಕ್ರಮಗಳನ್ನು ಮರೆಮಾಚಲು ಮಾಧ್ಯಮಗಳ ಧ್ವನಿ ಅಡಗಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆಕ್ರೋಶ ಹೊರಹಾಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸರಣಿ ಟೀಕೆ ಮಾಡಿರುವ ಜೆಡಿಎಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡಿದೆ. “ಸಂವಿಧಾನ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸಮಾಜವಾದಿ ಮುಖವಾಡ ತೊಟ್ಟ ಮಜವಾದಿಗೆ ಇಂದು ಅಧಿಕಾರ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಸರ್ಕಾರದ ಹಗರಣಗಳು, ವರ್ಗಾವಣೆ ದಂಧೆ ಮತ್ತು ಕಮಿಷನ್ ಹಾವಳಿಗಳು ಸಾರ್ವಜನಿಕವಾಗಿ ಬಯಲಾಗುತ್ತವೆ ಎಂಬ ಆತಂಕದಿಂದ ಮಾಧ್ಯಮಗಳ ಹಕ್ಕುಗಳನ್ನು ಕಸಿಯಲಾಗುತ್ತಿದೆ” ಎಂದು ಕಿಡಿಕಾರಿದೆ.

ಪತ್ರಿಕಾರಂಗವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದ್ದು, ಅದರ ಮೇಲೆ ಪ್ರಹಾರ ಮಾಡುವುದು ಪ್ರಜಾಪ್ರಭುತ್ವದ ಆಶಯಗಳನ್ನೇ ಬುಡಮೇಲು ಮಾಡಿದಂತೆ ಎಂದು ಜೆಡಿಎಸ್ ಹೇಳಿದೆ. ಸತ್ಯವನ್ನು ಮುಚ್ಚಿಡಲು ಮಾಧ್ಯಮಗಳ ಮೇಲೆ ಗೋಡೆಗಳನ್ನು ಕಟ್ಟುವ ಬದಲು, ಪಾರದರ್ಶಕ ಆಡಳಿತ ನೀಡುವತ್ತ ಗಮನಹರಿಸಿ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದೆ. ಇದು ಕೇವಲ ನಿರ್ಬಂಧವಲ್ಲ, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡುವ ಹತಾಶ ಪ್ರಯತ್ನ ಎಂದು ಜೆಡಿಎಸ್ ಟೀಕಿಸಿದೆ.

Comments (0)

Your email address will not be published. Required fields are marked *

Back to top button