ಜಪಾನ್‌ನ ಪಂಚ್ ಕೋತಿ ಮರಿಗೆ ಗೊಂಬೆಯೇ ತಾಯಿ! ಮರಿಯಿಂದ ಗೊಂಬೆ ಕಸಿದುಕೊಳ್ಳಲು ಸಿದ್ಧತೆ?

ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ‘ಪಂಚ್’ ಹೆಸರಿನ ಪುಟ್ಟ ಕೋತಿ ಮರಿ ಮತ್ತು ಅದರ ಗೊಂಬೆಯ ನಡುವಿನ ಬಾಂಧವ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿ ಪ್ರೀತಿಯಿಂದ ವಂಚಿತವಾಗಿದ್ದ ಈ ಕೋತಿಗೆ ಐಕಿಯಾದಿಂದ ತರಲಾಗಿದ್ದ ಗೊಂಬೆಯೇ ತಾಯಿಯ ಸ್ಥಾನ ತುಂಬಿತ್ತು. ತಿನ್ನುವಾಗ, ಮಲಗುವಾಗ ಹಾಗೂ ಇತರೆ ಕೋತಿಗಳಿಂದ ಭಯವಾದಾಗಲೆಲ್ಲಾ ಪಂಚ್ ಈ ಗೊಂಬೆಯನ್ನೇ ಅಪ್ಪಿಕೊಳ್ಳುತ್ತಿತ್ತು. ಆದರೆ, ಈಗ ಪಂಚ್‌ನಿಂದ ಆ ಗೊಂಬೆಯನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಸುದ್ದಿ ವೈರಲ್ ಆಗ್ತಿದೆ.
ಮೃಗಾಲಯದ ಮೂಲಗಳ ಪ್ರಕಾರ, ಪಂಚ್‌ಗೆ ಈಗ ಎಂಟು ತಿಂಗಳು ತುಂಬಿದ್ದು, ಅದು ಇತರ ಕೋತಿಗಳೊಂದಿಗೆ ಬೆರೆತು ಸಾಮಾಜಿಕ ಜೀವನಕ್ಕೆ ಹೊಂದಿಕೊಳ್ಳುವುದು ಅತ್ಯಗತ್ಯವಾಗಿದೆ. ಕೋತಿಗಳು ಆರು ತಿಂಗಳ ವಯಸ್ಸಿನ ನಂತರ ಹಾಲು ಕುಡಿಯುವುದನ್ನು ಬಿಟ್ಟು ಸ್ವತಂತ್ರವಾಗಬೇಕು ಎಂಬುದು ನಿಸರ್ಗದ ನಿಯಮ. ಒಂದು ವೇಳೆ ಪಂಚ್ ಈ ಗೊಂಬೆಯ ಮೇಲೆ ಅತಿಯಾದ ಅವಲಂಬನೆ ಮುಂದುವರಿಸಿದರೆ, ಅದು ತನ್ನ ಜಾತಿಯ ಇತರ ಕೋತಿಗಳೊಂದಿಗೆ ಸ್ನೇಹ ಬೆಳೆಸಲು ವಿಫಲವಾಗಬಹುದು ಮತ್ತು ಜೀವನಪರ್ಯಂತ ಒಂಟಿಯಾಗಿ ಉಳಿಯಬಹುದು ಎಂಬ ಕಳವಳ ವ್ಯಕ್ತವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವು ಬಳಕೆದಾರರು, “ಇನ್ನಷ್ಟು ದಿನ ಆಟಿಕೆ ಅದರ ಬಳಿಯೇ ಇರಲಿ, ಅದಕ್ಕೆ ಬೇರೆ ಯಾರೂ ಇಲ್ಲವಲ್ಲ” ಎಂದು ಮರುಕ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮಕ್ಕಳ ಉದಾಹರಣೆ ನೀಡಿ, “ಚಿಕ್ಕ ವಯಸ್ಸಿನಲ್ಲೇ ಇಂತಹ ಅಭ್ಯಾಸಗಳನ್ನು ಬಿಡಿಸದಿದ್ದರೆ ಅವುಗಳ ನೈಸರ್ಗಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ” ಎಂದು ಮೃಗಾಲಯದ ನಿರ್ಧಾರವನ್ನು ಬೆಂಬಲಿಸಿದ್ದಾರೆ.ಸದ್ಯಕ್ಕೆ ಮೃಗಾಲಯದ ಆಡಳಿತ ಮಂಡಳಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲವಾದರೂ, ಪಂಚ್‌ನ ಭವಿಷ್ಯದ ದೃಷ್ಟಿಯಿಂದ ನಿರ್ಧಾರ ಅನಿವಾರ್ಯ ಎನ್ನಲಾಗುತ್ತಿದೆ.




