ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯ ಬೆನ್ನಲ್ಲೇ, ಜಿಲ್ಲೆಯ ಮತ್ತೊಂದು ರಹಸ್ಯಮಯ ತಾಣವಾದ ಕಪ್ಪತ್ತಗುಡ್ಡದ ‘ಸಂಜೀವಿನಿ ಬೆಟ್ಟ’ದೊಳಗಿನ ಅಪಾರ ಸಂಪತ್ತಿನ ಕಥೆಗಳು ಈಗ ಜನರಲ್ಲಿ ಅಚ್ಚರಿ ಮೂಡಿಸುತ್ತಿವೆ. ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರಕ್ಕಿಂತಲೂ ಮಿಗಿಲಾದ, ಕುಬೇರನ ಖಜಾನೆಯನ್ನೇ ಹೋಲುವಂತಹ ಸಂಪತ್ತು ಈ ಬೆಟ್ಟದ ನಿಗೂಢ ಗವಿಯಲ್ಲಿದೆ ಎಂಬ ರೋಚಕ ಮಾಹಿತಿ ಈಗ ಹೊರಬೀಳುತ್ತಿದೆ. ಲಕ್ಕುಂಡಿಯ ಚಾಲುಕ್ಯರು ಮತ್ತು ವಿಜಯನಗರ ಅರಸರ ಗತವೈಭವದ ನೆನಪುಗಳ ನಡುವೆ, ಕಪ್ಪತ್ತಗುಡ್ಡದ ಈ ರಹಸ್ಯ ಗುಹೆಯು ದೇವಲೋಕದ ಸಂಪತ್ತನ್ನೇ ತನ್ನೊಡಲಲ್ಲಿ ಅಡಗಿಸಿಟ್ಟುಕೊಂಡಿದೆ ಎಂಬ ನಂಬಿಕೆ ಬಲವಾಗುತ್ತಿದೆ.

ಕಪ್ಪತ್ತಗುಡ್ಡದ ಕರಿಯಮ್ಮನ ಬೆಟ್ಟದಲ್ಲಿರುವ ಈ ನಿಗೂಢ ಗುಹೆಯ ಬಗ್ಗೆ ಅತ್ತಿಕಟ್ಟಿ ಗ್ರಾಮಸ್ಥರು ವಿಸ್ಮಯಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಹನುಮಂತನು ಸಂಜೀವಿನಿ ಪರ್ವತವನ್ನು ಹೊತ್ತೊಯ್ಯುವಾಗ ಬಿದ್ದ ತುಣುಕೇ ಈ ‘ಸಂಜೀವಿನಿ ಬೆಟ್ಟ’ ಎಂಬ ಐತಿಹ್ಯವಿದ್ದು, ಇದರೊಳಗಿರುವ ಗವಿಯಲ್ಲಿ ನೂರಾರು ವರ್ಷಗಳಿಂದ ಋಷಿಮುನಿಯೊಬ್ಬರು ತಪಸ್ಸು ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಗುಹೆಯೊಳಗೆ ಬಂಗಾರದ ಬೃಹತ್ ರಥ, ಚಿನ್ನದ ಎತ್ತುಗಳು, ವಜ್ರಖಚಿತ ದೇವಿಯ ಮೂರ್ತಿ ಹಾಗೂ ಅಪಾರವಾದ ವಜ್ರ-ವೈಢೂರ್ಯಗಳ ಸಂಪತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಿಂದೆ ಇಲ್ಲಿ ಕಾರ್ಯನಿರ್ವಹಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರ ಬಳಿ ಈ ಸಂಪತ್ತಿನ ಬಗ್ಗೆ ಉಲ್ಲೇಖವಿರುವ ಹಳೆಯ ಲೇಖನಿ ಅಥವಾ ಪುಸ್ತಕವಿತ್ತು ಎಂದು ಗ್ರಾಮಸ್ಥರು ಸ್ಮರಿಸುತ್ತಾರೆ.
ಈ ಗುಹೆಯ ರಹಸ್ಯಕ್ಕೆ ಸಂಬಂಧಿಸಿದಂತೆ ಹತ್ತು ವರ್ಷಗಳ ಹಿಂದೆ ನಡೆದ ಘಟನೆಯೊಂದು ಮೈಜುಂ ಎನಿಸುವಂತಿದೆ. ‘ಚುಟ್ಟಾ ಸ್ವಾಮೀಜಿ’ ಎಂದೇ ಕರೆಯಲ್ಪಡುತ್ತಿದ್ದ ಸಾಧುವೊಬ್ಬರು ಈ ಗವಿಯಲ್ಲಿ ತಪಸ್ಸು ಕುಳಿತಿದ್ದರು. ಗುಹೆಯೊಳಗಿರುವ ಋಷಿಮುನಿಯನ್ನು ಹೊರತರುವುದಾಗಿ ಹೇಳಿದ್ದ ಅವರು, ಮಳೆ ಬರಿಸುವಂತಹ ಅನೇಕ ಪವಾಡಗಳನ್ನು ಮಾಡಿ ತೋರಿಸಿದ್ದರು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಈ ಸ್ವಾಮೀಜಿಯನ್ನು ಅಲ್ಲಿಂದ ಹೊರಹಾಕಿದ್ದರು. ಆಗ ಅಧಿಕಾರಿಗಳೇ ಈ ಗವಿಯೊಳಗೆ ಅಸಾಧಾರಣ ಸಂಪತ್ತಿದೆ ಎಂಬ ರಹಸ್ಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದರು. ಗುಹೆಯೊಳಗೆ ಹೋದರೆ ವಿಶಾಲವಾದ ಲೋಕವೇ ತೆರೆದುಕೊಳ್ಳುತ್ತದೆ, ಅಲ್ಲಿನ ಸಂಪತ್ತಿನ ಪಕ್ಕದಲ್ಲಿ ಸದಾ ನೀರು ಹರಿಯುತ್ತಿರುತ್ತದೆ ಮತ್ತು ನಾಗಸರ್ಪಗಳು ಈ ಖಜಾನೆಗೆ ಕಾವಲಿವೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ.


