ಇರಾನ್ನ ‘ಹತ್ತು’ ಶಾಂತಿ ಮಂತ್ರ; ಅಮೆರಿಕ ಮುಂದೆ 10 ಅಂಶಗಳ ಪ್ರಸ್ತಾವನೆ!

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ, ಇರಾನ್ ಶಾಂತಿ ಮಾತುಕತೆಗಾಗಿ 10 ಪ್ರಮುಖ ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ಹತ್ತು ಅಂಶಗಳ ಆಧಾರದ ಮೇಲೆ ಮುಂದಿನ ಚರ್ಚೆಗಳು ನಡೆಯಲಿದ್ದು, ಪ್ರಮುಖವಾಗಿ ಪರಸ್ಪರ ಆಕ್ರಮಣಶೀಲತೆ ಮಾಡದಿರುವ ಬದ್ಧತೆಯನ್ನು ಇರಾನ್ ಒತ್ತಿ ಹೇಳಿದೆ. ಇದರೊಂದಿಗೆ ವಿಶ್ವದ ಪ್ರಮುಖ ತೈಲ ಮಾರ್ಗವಾದ ಹರ್ಮುಜ್ ಜಲಸಂಧಿಯ ಮೇಲೆ ತನ್ನ ಪೂರ್ಣ ನಿಯಂತ್ರಣ ಮುಂದುವರಿಯಬೇಕು ಎಂಬ ಪಟ್ಟನ್ನು ಇರಾನ್ ಸಡಿಲಿಸಿಲ್ಲ.
ಇರಾನ್ನ ಈ ಪ್ರಸ್ತಾವನೆಯಲ್ಲಿ ಪರಮಾಣು ವಿಚಾರ ಹಾಗೂ ಆರ್ಥಿಕ ನಿರ್ಬಂಧಗಳ ಬಗ್ಗೆಯೂ ಕಠಿಣ ನಿಲುವು ತಳೆಯಲಾಗಿದೆ. ಇರಾನ್ ನಡೆಸುತ್ತಿರುವ ಯುರೇನಿಯಂ ಪುಷ್ಟೀಕರಣವನ್ನು ಜಗತ್ತು ಒಪ್ಪಿಕೊಳ್ಳಬೇಕು ಹಾಗೂ ಅಮೆರಿಕ ವಿಧಿಸಿರುವ ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರ್ಥಿಕ ನಿರ್ಬಂಧಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಇರಾನ್ ಆಗ್ರಹಿಸಿದೆ. ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಐಇಎಇ (IAEA) ಆಡಳಿತ ಮಂಡಳಿ ಈ ಹಿಂದೆ ಇರಾನ್ ವಿರುದ್ಧ ಹೊರಡಿಸಿರುವ ಎಲ್ಲಾ ನಿರ್ಣಯಗಳನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಈ ಹತ್ತು ಅಂಶಗಳಲ್ಲಿ ಸೇರಿಸಲಾಗಿದೆ.
ಇನ್ನುಳಿದಂತೆ ಯುದ್ಧದ ಹಾನಿಗೆ ಸಂಬಂಧಿಸಿದಂತೆ ಇರಾನ್ ಪರಿಹಾರದ ನಿರೀಕ್ಷೆಯಲ್ಲಿದೆ. ಹರ್ಮುಜ್ ಜಲಸಂಧಿಯಿಂದ ಬರುವ ಆದಾಯವನ್ನು ಮೂಲಸೌಕರ್ಯ ಪುನರ್ನಿರ್ಮಾಣಕ್ಕೆ ಬಳಸಿಕೊಳ್ಳುವುದು ಹಾಗೂ ಅಮೆರಿಕ ಇರಾನ್ಗೆ ಯುದ್ಧ ಪರಿಹಾರದ ಹಣವನ್ನು ಪಾವತಿಸಬೇಕು ಎಂಬ ಅಚ್ಚರಿಯ ಬೇಡಿಕೆಯನ್ನು ಮುಂದಿಟ್ಟಿದೆ. ಅಮೆರಿಕ ತನ್ನ ಯುದ್ಧ ಪಡೆಗಳನ್ನು ಈ ಪ್ರದೇಶದಿಂದ ಹಿಂತೆಗೆದುಕೊಳ್ಳಬೇಕು ಮತ್ತು ಎಲ್ಲಾ ರಂಗಗಳಲ್ಲಿ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಇರಾನ್ ಹೇಳಿದೆ. ಕೊನೆಯದಾಗಿ, ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂಬ ಷರತ್ತನ್ನು ವಿಧಿಸುವ ಮೂಲಕ ಇರಾನ್ ತನ್ನ ಪ್ರಾದೇಶಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮುಂದಾಗಿದೆ.




