ಚಂಡೀಗಢ: ಹಿರಿಯ ಐಪಿಎಸ್ ಅಧಿಕಾರಿ ವೈ.ಪೂರಣ್ ಕುಮಾರ್ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ..
ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಚಂಡೀಗಢ ಪೊಲೀಸರು ಮತ್ತು ಹಿರಿಯ ಹರಿಯಾಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕುಮಾರ್ ಅವರು ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೂರಣ್ ಕುಮಾರ್ ಅವರು ಸರ್ವಿಸ್ ರಿವಾಲ್ವರ್ ಅನ್ನೇ ಬಳಸಿದ್ದಾರೆ ಎಂದು ಹೇಳಲಾಗಿದೆ. ಅವರ ನಿರ್ಧಾರದ ಹಿಂದಿನ ಸಂದರ್ಭಗಳು ಮತ್ತು ಸಂಭವನೀಯ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಐಪಿಎಸ್ ಅಧಿಕಾರಿಯ ಇಂದು ಮಧ್ಯಾಹ್ನ 1.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಅವರ ಕುಟುಂಬದ ಸದಸ್ಯರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕನ್ವರ್‌ದೀಪ್ ಕೌರ್ ಹೇಳಿದ್ದಾರೆ.
ಎಡಿಜಿಪಿ ವೈ. ಪೂರಣ್ ಕುಮಾರ್ ಹರಿಯಾಣದಲ್ಲಿ ಹಲವು ವರ್ಷಗಳ ಕಾಲ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದರು. ಅವರ ಪತ್ನಿ ಐಎಎಸ್ ಅಧಿಕಾರಿ ಅಮ್ನೀತ್ ಪಿ. ಕುಮಾರ್ ಅವರು ಪ್ರಸ್ತುತ ಹರಿಯಾಣ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಘಟನೆಯ ಸಮಯದಲ್ಲಿ ಅಮ್ನೀತ್ ಕುಮಾರ್ ವಿದೇಶದಲ್ಲಿದ್ದರು. ಅವರು ಹರಿಯಾಣದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರೊಂದಿಗೆ ಜಪಾನ್‌ಗೆ ಅಧಿಕೃತ ನಿಯೋಗದಲ್ಲಿ ಇದ್ದರು. ಪತಿಯ ಸಾವಿನ ವಿಷಯ ತಿಳಿಸಲಾಗಿದ್ದು, ಅವರು ಶೀಘ್ರದಲ್ಲೇ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.


