ದೇಶ/ವಿದೇಶಸುದ್ದಿ

ಹೊರ್ಮುಜ್ ಜಲಸಂಧಿ ದಾಟಿದ ಭಾರತದ ಎಲ್‌ಪಿಜಿ ಟ್ಯಾಂಕರ್: ಗುಜರಾತ್ ಮೇಲೆ ಇರಾನ್‌ಗೆ ವಿಶೇಷ ಪ್ರೀತಿ!

ನವದೆಹಲಿ:  ಮಧ್ಯಪ್ರಾಚ್ಯ ಯುದ್ಧದ ಮಧ್ಯೆ ಭಾರತದ ಏಳನೇ ಎಲ್‌ಪಿಜಿ ಟ್ಯಾಂಕರ್ ಗ್ರೀನ್ ಸಾನ್ವಿ ಹೊರ್ಮುಜ್ ಜಲಸಂಧಿಯನ್ನು ದಾಟಿದಾಗ, ಇರಾನ್ ಭಾರತಕ್ಕೆ ವಿಶೇಷ ಸಂದೇಶವನ್ನು ರವಾನಿಸಿದೆ. ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಮುಂಬೈಯಲ್ಲಿರುವ ಇರಾನಿನ ಕಾನ್ಸುಲೇಟ್, ಭಾರತ ಮತ್ತು ನಿರ್ದಿಷ್ಟವಾಗಿ ಗುಜರಾತ್ ಪ್ರಿಯವಾದ ಸ್ಥಾನ ಹೊಂದಿದೆ ಎಂದು ಹೇಳಿದೆ. ಎಲ್‌ಪಿಜಿ ಟ್ಯಾಂಕರ್ ಸಾಗಣೆಯನ್ನು ಭಾರತೀಯ ರಾಜತಾಂತ್ರಿಕತೆಯ ಗೆಲುವು ಎಂದು ಶ್ಲಾಘಿಸಿದ ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರ ಪೋಸ್ಟ್‌ಗೆ ಕಾನ್ಸುಲೇಟ್ ಜನರಲ್ ಪ್ರತಿಕ್ರಿಯಿಸಿದರು.

ʼʼಭಾರತ ವಿಶೇಷವಾಗಿ ಗುಜರಾತ್, ಇತಿಹಾಸದಲ್ಲಿ ಒಂದು ಗೌರವಾನ್ವಿತ ಸ್ಥಾನ ಹೊಂದಿದೆ. ಶತಮಾನಗಳ ಹಿಂದೆ ನಮ್ಮ ದೇಶದ ಜನರನ್ನು ಭಾರತ ಆತ್ಮೀಯವಾಗಿ ಸ್ವಾಗತಿಸಿತ್ತುʼʼ ಎಂದು ಇರಾನ್ ಕಾನ್ಸುಲೇಟ್ ಜನರಲ್ ಹೇಳಿದರು. ಬಹುಶಃ ಗುಜರಾತ್‌ನ ಪ್ರಾಚೀನ ಬಂದರು ಲೋಥಲ್‌ ಸುಮಾರು 4,000 ವರ್ಷಗಳ ಹಿಂದೆ ಸಿಂಧು ಕಣಿವೆ ನಗರಗಳನ್ನು ಪರ್ಷಿಯನ್ ಕರಾವಳಿಯೊಂದಿಗೆ ಸಂಪರ್ಕಿಸಿತ್ತು. ಈ ಶಾಶ್ವತ ನಾಗರಿಕತೆಯ ಬಂಧವನ್ನು ನಿರ್ಮಿಸುತ್ತ, ಸ್ನೇಹ ಮತ್ತು ಸಹಕಾರದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆʼʼ ಎಂದು ಇರಾನ್ ಹೇಳಿದೆ.

46,650 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ಗ್ರೀನ್ ಸಾನ್ವಿ, ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಮುಚ್ಚಿರುವ ಪ್ರಮುಖ ಹಡಗು ಚಾಕ್‌ಪಾಯಿಂಟ್ ಅನ್ನು ದಾಟಿ ಭಾರತಕ್ಕೆ ಆಗಮಿಸುತ್ತಿರುವುದರ ವೇಳೆ ಸಂಘವಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ಬಂದಿದೆ.

ಇಲ್ಲಿಯವರೆಗೆ, ಎಲ್‌ಪಿಜಿ ಹೊತ್ತ ಆರು ಹಡಗುಗಳು ಹೊರ್ಮುಜ್ ಜಲಸಂಧಿ ದಾಟಿ ಭಾರತೀಯ ಬಂದರು ತಲುಪಿವೆ. ವಿಶ್ವದ ಒಟ್ಟು ತೈಲ ಅಗತ್ಯಗಳಲ್ಲಿ ಐದನೇ ಒಂದು ಭಾಗವನ್ನು ಪೂರೈಸುವ ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ಸ್ಥಗಿತಗೊಳಿಸಿದ್ದು, ಸುಮಾರು 17 ಭಾರತೀಯ ಹಡಗುಗಳು ಸಿಲುಕಿಕೊಂಡಿವೆ.

ಈ ಪ್ರಮುಖ ಜಲಮಾರ್ಗದ ಮುಚ್ಚುವಿಕೆಯು ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಿದೆ. ಇದೀಗ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ ಆಸುಪಾಸಿನಲ್ಲಿದೆ.

ಇರಾನ್ ಶತ್ರು ಹಡಗುಗಳಿಗೆ ಹೊರ್ಮುಜ್ ಮೂಲಕ ಸಾಗುವುದನ್ನು ನಿರ್ಬಂಧಿಸಿದ್ದರೂ, ಅದು ಐದು ಸ್ನೇಹಪರ ರಾಷ್ಟ್ರಗಳಿಗೆ (ಭಾರತ, ರಷ್ಯಾ, ಚೀನಾ, ಇರಾಕ್ ಮತ್ತು ಪಾಕಿಸ್ತಾನ) ಕಾರಿಡಾರ್ ಮುಕ್ತಗೊಳಿಸಿದೆ. ಈ ಇಂಧನ ಕಾರಿಡಾರ್ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸುಂಕ ವಿಧಿಸುವ ಯೋಜನೆಯನ್ನು ಇರಾನ್ ಅನುಮೋದಿಸಿದೆ.

ಈ ಮಧ್ಯೆ ಪಾವತಿ ಸಂಬಂಧಿತ ಸಮಸ್ಯೆಗಳಿಂದಾಗಿ ಭಾರತಕ್ಕೆ ಬರುತ್ತಿದ್ದ ಇರಾನಿನ ಕಚ್ಚಾ ತೈಲ ಹಡಗನ್ನು ಚೀನಾಕ್ಕೆ ಕಳಿಸಲಾಗಿದೆ ಎಂಬ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪೆಟ್ರೋಲಿಯಂ ಸಚಿವಾಲಯ, ಭಾರತೀಯ ಸಂಸ್ಕರಣಾಗಾರರು ಈಗಾಗಲೇ ಇರಾನ್‌ನಿಂದ ತೈಲ ಸರಬರಾಜುಗಳನ್ನು ಪಡೆದುಕೊಂಡಿದ್ದಾಗಿ ಹೇಳಿದೆ.

Comments (0)

Your email address will not be published. Required fields are marked *

Back to top button