ನೋಯ್ಡಾ: ಭಾರತದ ಆರ್ಥಿಕತೆಯು ದಿನೇ ದಿನೇ ಬಲಗೊಳ್ಳುತ್ತಿದ್ದಂತೆ, ಜನರ ಮೇಲಿನ ತೆರಿಗೆ ಹೊರೆಯನ್ನು ಮತ್ತಷ್ಟು ಕಡಿಮೆಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆತ್ಮನಿರ್ಭರ್ ಭಾರತದ ಪ್ರಾಮುಖ್ಯತೆಯನ್ನು ತಿಳಿದುಕೊಂಡಿದ್ದು, ಭಾರತ ಯಾವತ್ತೂ ಇತರ ದೇಶದ ಮೇಲೆ ಅವಲಂಬಿತವಾಗುವುದಿಲ್ಲ. ನಾವು ಬೇರೆ ದೇಶದ ಮೇಲೆ ಅವಲಂಬಿತವಾಗುವುದು ಎಂದರೇ ಅಸಹಾಯಕರು ಎಂದೇ ಅರ್ಥ. ಅಲ್ಲದೇ ಒಂದು ದೇಶ ಮತ್ತೊಂದು ದೇಶದ ಮೇಲೆ ಅವಲಂಬಿತರಾಗುವುದು ಅಭಿವೃದ್ಧಿ ಜತೆ ಹೊಂದಾಣಿಕೆ ಮಾಡಿಕೊಂಡಂತೆ ಎಂಬುದಾಗಿ ಪ್ರಧಾನಿ ವಿಶ್ಲೇಷಿಸಿದ್ದಾರೆ. ಉತ್ತರಪ್ರದೇಶದ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ(2025) ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬೃಹತ್ ಮೇಳದಲ್ಲಿ 2,250ಕ್ಕೂ ಅಧಿಕ ವ್ಯಾಪಾರ ಮಳಿಗೆಗಳು ಪಾಲ್ಗೊಂಡು ತಮ್ಮ ವಸ್ತುಗಳನ್ನು ಪ್ರದರ್ಶಿಸಿ, ಮಾರಾಟ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ವರ್ಷದ ಕಾರ್ಯಕ್ರಮದಲ್ಲಿ ರಷ್ಯಾ ಕೂಡಾ ಸಹಭಾಗಿತ್ವ ಹೊಂದಿರುವುದಾಗಿ ತಿಳಿಸಿದ ಪ್ರಧಾನಿ ಮೋದಿ, ಇದು ಉಭಯ ದೇಶಗಳ ನಡುವಿನ ದೀರ್ಘಕಾಲದ ಸ್ನೇಹಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಜಾಗತಿಕ ಸಂಘರ್ಷ ಮತ್ತು ಅನಿಶ್ಚಿತತೆಯ ನಡುವೆಯೂ ಭಾರತದ ಅಭಿವೃದ್ಧಿ ವೇಗದಲ್ಲಿ ಮುನ್ನಡೆಯುತ್ತಿದೆ. ಜಾಗತಿಕ ಸಂಘರ್ಷದ ಮಧ್ಯೆ ಭಾರತ ಹೊಸ ದಿಕ್ಕಿನಲ್ಲಿ ದಾಪುಗಾಲು ಇಡುತ್ತಿದೆ. ಭವಿಷ್ಯದಲ್ಲಿ ಭಾರತ ಇನ್ನಷ್ಟು ಸಶಕ್ತವಾಗಿ ಬೆಳೆಯಲಿದೆ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿ, ಆತ್ಮನಿರ್ಭರ್ ಭಾರತಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.


