ವಾರಣಾಸಿ: ಸ್ವ-ಕ್ಷೇತ್ರ ವಾರಣಾಸಿಗೆ ಇಂದು ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ನಗರಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಯೂಜನೆಗಳಿಗೆ ಚಾಲನೆ ನೀಡಿದರು.
ಭಾರತವನ್ನು ಸತ್ತ ಆರ್ಥಿಕತೆ ಎಂದು ಟ್ರಂಪ್ ಟೀಕಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಭಾರತ ತನ್ನ ಆರ್ಥಿಕ ಆದ್ಯತೆಗಳ ಮೇಲೆ ಕೇಂದ್ರೀಕರಿಸಬೇಕು ಮತ್ತು ಪ್ರತಿಯೊಬ್ಬ ನಾಗರಿಕನೂ ಸ್ವದೇಶಿ ವಸ್ತುಗಳನ್ನು ಖರೀದಿಸಲು ಸಂಕಲ್ಪ ಮಾಡಬೇಕು ಎಂದು ಹೇಳಿದರು .ಇಂದು, ವಿಶ್ವ ಆರ್ಥಿಕತೆಯು ಅನೇಕ ಏರಿಳಿತಗಳನ್ನು ಎದುರಿಸುತ್ತಿದೆ. ಅನಿಶ್ಚಿತತೆಯ ವಾತಾವರಣವಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಂದು ದೇಶವೂ ತನ್ನದೇ ಆದ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತಿದೆ.
ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಆದ್ದರಿಂದ, ಅದರ ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕು. ನಮ್ಮ ರೈತರು, ನಮ್ಮ ಕೈಗಾರಿಕೆಗಳು, ನಮ್ಮ ಯುವಜನರಿಗೆ ಉದ್ಯೋಗ, ಅವರ ಹಿತಾಸಕ್ತಿಗಳು ಇವೆಲ್ಲವೂ ನಮಗೆ ಅತ್ಯಂತ ಮುಖ್ಯ. ಸರ್ಕಾರ ಈ ದಿಕ್ಕಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಆದರೆ, ದೇಶದ ನಾಗರಿಕರಾಗಿ, ನಮಗೂ ಕೆಲವು ಜವಾಬ್ದಾರಿಗಳಿವೆ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಬಯಸುವ ಯಾರಾದರೂ, ಯಾವುದೇ ರಾಜಕೀಯ ಪಕ್ಷ, ಯಾವುದೇ ನಾಯಕರು, ದೇಶದ ಹಿತಾಸಕ್ತಿಯಲ್ಲಿ ಮಾತನಾಡಬೇಕು. ಸ್ವದೇಶಿ ವಸ್ತುಗಳನ್ನು ಖರೀದಿಸಲು ನಿರ್ಧರಿಸಬೇಕೆಂದು ಜನರಿಗೆ ಹೇಳಬೇಕು.
ನಾವು ಏನನ್ನಾದರೂ ಖರೀದಿಸಲು ನಿರ್ಧರಿಸಿದಾಗ, ಒಂದೇ ನಿರ್ಧಾರವಿರಬೇಕು. ಒಬ್ಬ ಭಾರತೀಯ ಕಷ್ಟಪಟ್ಟು ತಯಾರಿಸುವ ವಸ್ತುಗಳನ್ನು ನಾವು ಖರೀದಿ ಮಾಡಬೇಕು. ಭಾರತದ ಜನರು ಕೌಶಲ್ಯವನ್ನು ಬಳಸಿಕೊಂಡು, ಭಾರತದ ಜನರ ಬೆವರಿನಿಂದ ತಯಾರಿಸಿದ ಯಾವುದೇ ವಸ್ತುವು ನಮಗೆ ಸ್ವದೇಶಿ’ ಆಗಿದೆ . ನಾವು ಸ್ಥಳೀಯರಿಗೆ ಧ್ವನಿ ಮಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದ್ರು.


