Top Newsರಾಜಕೀಯರಾಜ್ಯಶಿಕ್ಷಣ

ರೈತರನ್ನು ಮದುವೆಯಾದ್ರೆ ಸಿಗುತ್ತೆ ವಿಶೇಷ ಭತ್ಯೆ! ಶಾಸಕರ ಪತ್ರ ವೈರಲ್!

ಇತ್ತೀಚಿನ ದಿನಗಳಲ್ಲಿ ಕೃಷಿ ನಂಬಿಕೊಂಡಿರುವ ಗ್ರಾಮೀಣ ಭಾಗದ ಯುವಕರಿಗೆ ವಧುಗಳ ಕೊರತೆ ತೀವ್ರವಾಗುತ್ತಿದ್ದು, ಈ ಗಂಭೀರ ಸಮಸ್ಯೆಯನ್ನು ನಿವಾರಿಸಲು ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ಜೀವನೋಪಾಯವಾಗಿಸಿಕೊಂಡಿರುವ ಯುವಕರನ್ನು ಮದುವೆಯಾಗಲು ಹೆಣ್ಣು ಮಕ್ಕಳು ನಿರಾಕರಿಸುತ್ತಿರುವುದರಿಂದ ಅನೇಕ ಯುವಕರು ಮೂವತ್ತು ವರ್ಷ ದಾಟಿದರೂ ವಿವಾಹವಾಗದೆ ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಅಧಿವೇಶನದಲ್ಲಿ ರೈತ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ಹಾಗೂ ಸರ್ಕಾರದ ವತಿಯಿಂದ ವಿಶೇಷ ಸ್ಥಾನಮಾನವನ್ನು ಘೋಷಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

ಈ ಹಿಂದೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಿ, ಕೃಷಿಕರನ್ನು ಮದುವೆಯಾಗುವ ಯುವತಿಯರ ಹೆಸರಿನಲ್ಲಿ 10 ಲಕ್ಷ ರೂಪಾಯಿಗಳ ಸ್ಥಿರ ಠೇವಣಿ ಇಡುವ ಯೋಜನೆಯನ್ನು ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದರು. ಬಹುತೇಕ ಯುವತಿಯರು ನಗರ ಪ್ರದೇಶದ ಮತ್ತು ಸರ್ಕಾರಿ ನೌಕರಿ ಇರುವ ಗಂಡು ಮಕ್ಕಳನ್ನೇ ಬಯಸುತ್ತಿರುವುದರಿಂದ ಹಳ್ಳಿಗಳಲ್ಲಿರುವ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಮದುವೆಯಾಗುವುದು ಸವಾಲಾಗಿ ಪರಿಣಮಿಸಿದೆ, ಆದ್ದರಿಂದ ಸರ್ಕಾರವು ಈ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ರೂಪಿಸಿ ಕೃಷಿ ನಂಬಿದ ಯುವಕರ ಬಾಳಿಗೆ ಆಸರೆಯಾಗಬೇಕಿದೆ ಎಂಬ ಕೂಗು ಕೇಳಿಬಂದಿದೆ.

Comments (0)

Your email address will not be published. Required fields are marked *

Back to top button