ದೊಡ್ಡಬಳ್ಳಾಪುರ: ಬಿಜೆಪಿ ಶಾಸಕ ಧೀರಜ್ ಮುನಿರಾಜು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸರ್ಕಾರದ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ ನಡೆಸುವ ಶಾಸಕರ ಮನೆ ಮುಂದೆ ಕಸ ಸುರಿಯುತ್ತೇವೆ ಎಂಬ ಡಿಕೆಶಿ ಹೇಳಿಕೆಯನ್ನು ಖಂಡಿಸಿದ ಅವರು, “ಧೈರ್ಯವಿದ್ದರೆ ನನ್ನ ಮನೆ ಮುಂದೆ ಕಸ ಹಾಕಿ, ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದು ಸವಾಲು ಹಾಕಿದ್ದಾರೆ. ಕಸದ ಲಾರಿಗಳನ್ನು ತಡೆದ ಘಟನೆಯನ್ನು ಸಮರ್ಥಿಸಿಕೊಂಡ ಶಾಸಕರು, ನಿಗದಿತ ಸಂಖ್ಯೆಗಿಂತ ಹೆಚ್ಚಿನ ಲಾರಿಗಳು ಬಂದಿದ್ದಕ್ಕೆ ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಅನುದಾನ ಹಂಚಿಕೆಯಲ್ಲಿ ದೊಡ್ಡಬಳ್ಳಾಪುರಕ್ಕೆ ತಾರತಮ್ಯ ಮಾಡಲಾಗುತ್ತಿದೆ, ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಅತಿ ಹೆಚ್ಚು ಕಸದ ಲಾರಿಗಳು ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದರೂ, ಕೇವಲ 10 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಕಡಿಮೆ ಕಸದ ಲಾರಿಗಳು ಹೋಗುವ ಕ್ಷೇತ್ರಗಳಿಗೆ 50 ರಿಂದ 90 ಕೋಟಿ ರೂಪಾಯಿಗಳವರೆಗೆ ಅನುದಾನ ನೀಡಲಾಗಿದೆ ನಮಗೆ ಸರ್ಕಾರದ ಕಸವೂ ಬೇಡ, ಕಸದ ಹಣವೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹೈಕೋರ್ಟ್ ಮತ್ತು ಎನ್‌ಜಿಟಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ ಶಾಸಕರು, ಡಿಕೆಶಿ ಅವರ ಬ್ಲಾಕ್‌ಮೇಲ್ ತಂತ್ರಗಳಿಗೆ ಮಣಿಯುವುದಿಲ್ಲ , “ನನ್ನ ಮೇಲೆ ಎಸ್ಮಾ ಜಾರಿ ಮಾಡಿ ಅಥವಾ ಜೈಲಿಗೆ ಕಳುಹಿಸಿ, ಯಾವುದಕ್ಕೂ ಸಿದ್ಧನಿದ್ದೇನೆ. ಆದರೆ ನಮ್ಮ ರೈತರಿಗೆ ಮತ್ತು ದೊಡ್ಡಬಳ್ಳಾಪುರದ ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ” ಎಂದು ಅವರು ಗುಡುಗಿದ್ದಾರೆ.


