New delhiದೇಶ/ವಿದೇಶಸುದ್ದಿ

ವಿಮಾನ ಇಂಧನ ಬೆಲೆಯಲ್ಲಿ ಭಾರಿ ಏರಿಕೆ..!

ನವದೆಹಲಿ: ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ವಿಮಾನ ಇಂಧನ (ATF) ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಸರ್ಕಾರವು ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಸಮಾಧಾನಕರ ನಿರ್ಧಾರ ಕೈಗೊಂಡಿದೆ. ಆರಂಭದಲ್ಲಿ ದೆಹಲಿಯಲ್ಲಿ ಕಿಲೋಲೀಟರ್‌ಗೆ ಒಂದು ಲಕ್ಷ ರೂ.ಗಿಂತ ಕಡಿಮೆ ಇದ್ದ ಜೆಟ್ ಇಂಧನದ ಬೆಲೆಯನ್ನು 2.07 ಲಕ್ಷ ರೂ.ಗೆ ಅಂದರೆ ದುಪ್ಪಟ್ಟು ಏರಿಸಲಾಗಿತ್ತು.

ಆದರೆ, ನಾಗರಿಕ ವಿಮಾನಯಾನ ಸಚಿವಾಲಯವು ತೈಲ ಕಂಪನಿಗಳೊಂದಿಗೆ ಚರ್ಚಿಸಿ, ಒಮ್ಮೆಗೇ ಶೇ. 100ರಷ್ಟು ಏರಿಕೆ ಮಾಡುವ ಬದಲಿಗೆ ಹಂತ ಹಂತವಾಗಿ ಹೆಚ್ಚಿಸಲು ನಿರ್ಧರಿಸಿತು. ಇದರಿಂದಾಗಿ ಬೆಲೆಯನ್ನು ತಕ್ಷಣವೇ ಪರಿಷ್ಕರಿಸಿ 1.04 ಲಕ್ಷ ರೂ.ಗೆ ಇಳಿಸಲಾಗಿದ್ದು, ದೇಶೀಯ ಏರ್‌ಲೈನ್ಸ್‌ಗಳಿಗೆ ಈ ಏರಿಕೆಯನ್ನು ಶೇ. 8.5ಕ್ಕೆ (ಲೀಟರ್‌ಗೆ ಸುಮಾರು 15 ರೂ.) ಸೀಮಿತಗೊಳಿಸಲಾಗಿದೆ.

ಆದರೆ, ಈ ರಿಯಾಯಿತಿ ಕೇವಲ ಭಾರತದೊಳಗೆ ಸಂಚರಿಸುವ ದೇಶೀಯ ವಿಮಾನಗಳಿಗೆ ಮಾತ್ರ ಅನ್ವಯಿಸಲಿದೆ. ವಿದೇಶಿ ವಿಮಾನ ಸಂಸ್ಥೆಗಳು ಮತ್ತು ಚಾರ್ಟರ್ ಫ್ಲೈಟ್‌ಗಳಂತಹ ನಾನ್-ಶೆಡ್ಯೂಲ್ಡ್ ಆಪರೇಟರ್‌ಗಳಿಗೆ ಪೂರ್ತಿ ಪ್ರಮಾಣದ ಬೆಲೆ ಏರಿಕೆ ಅನ್ವಯವಾಗಲಿದ್ದು, ಅವರು ಕಿಲೋಲೀಟರ್‌ಗೆ 2.07 ಲಕ್ಷ ರೂ. ಪಾವತಿಸಬೇಕಾಗುತ್ತದೆ. ದೊಡ್ಡ ಕಮರ್ಷಿಯಲ್ ವಿಮಾನಗಳು ಗಂಟೆಗೆ ಸರಾಸರಿ 13,000 ಲೀಟರ್ ಇಂಧನ ಬಳಸುವುದರಿಂದ, ಹೊಸ ದರದ ಪ್ರಕಾರ ಒಂದು ಗಂಟೆಯ ಸಂಚಾರಕ್ಕೆ ಇಂಧನ ವೆಚ್ಚವೇ ಸುಮಾರು 30 ಲಕ್ಷ ರೂ. ತಗುಲುವ ಸಾಧ್ಯತೆಯಿದೆ. ದೇಶೀಯ ವಿಮಾನಗಳಿಗೂ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ದರ ಏರಿಕೆ ಮಾಡುವ ಸಾಧ್ಯತೆಯಿದ್ದು, ಸದ್ಯಕ್ಕೆ ವಿಮಾನ ಟಿಕೆಟ್ ದರ ವಿಪರೀತ ಏರಿಕೆಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

Comments (0)

Your email address will not be published. Required fields are marked *

Back to top button