ವಿಜಯಪುರ: ಕಗ್ಗೋಡು ಗ್ರಾಮದಲ್ಲಿ ಖ್ಯಾತ ಸ್ವಾಮೀಜಿಯೊಬ್ಬರನ್ನು ಗುರಿಯಾಗಿಸಿ ನಡೆದ ಹನಿಟ್ರ್ಯಾಪ್ ಪ್ರಕರಣ ಈಗ ರಾಜ್ಯಾದ್ಯಂತ ಸಂಚಲನ ಮೂಡಿಸುತ್ತಿದೆ. ಸಂಚು ರೂಪಿಸಿದ್ದ ಕಿಡಿಗೇಡಿಗಳು ಶ್ರೀಗಳನ್ನು ಮಾತುಕತೆಯ ನೆಪದಲ್ಲಿ ಕರೆಯಿಸಿ ಅವರ ಮೇಲೆ ಬರ್ಬರ ದಾಳಿ ನಡೆಸಿದ್ದಲ್ಲದೆ, ತುಮಕೂರು ಮೂಲದ ಮಹಿಳೆಯೊಬ್ಬಳನ್ನು ಬಳಸಿಕೊಂಡು ಆಕ್ಷೇಪಾರ್ಹ ವಿಡಿಯೋ ಚಿತ್ರೀಕರಿಸಿ ಭೀಕರ ಚಿತ್ರಹಿಂಸೆ ನೀಡಿದ್ದಾರೆ. ಈ ವಿಡಿಯೋವನ್ನು ಇಟ್ಟುಕೊಂಡು ಬರೋಬ್ಬರಿ 3 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಈ ಗ್ಯಾಂಗ್, ಸ್ವಾಮೀಜಿಯವರ ಘನತೆಗೆ ಮಸಿ ಬಳಿಯುವ ಸಂಚು ರೂಪಿಸಿದೆ.
ಘಟನೆ ನಡೆದ ಅಂದು ರಾತ್ರಿ ಸಂಧಾನದ ಹೆಸರಿನಲ್ಲಿ ಬಿಜಾಪುರದ ಇಬ್ಬರು ಪ್ರಭಾವಿ ನಾಯಕರು ಎಂಟ್ರಿ ಕೊಟ್ಟಿದ್ದು, ಇದರ ಹಿಂದೆ ದೊಡ್ಡ ಮಟ್ಟದ ರಾಜಕೀಯ ಪಿತೂರಿ ಅಡಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಶ್ರೀಗಳ ವಿರುದ್ಧ ಪ್ರತಿಕ್ಷಣವೂ ಮತ್ತಿಬ್ಬರು ಲೀಡರ್ಸ್‌ಗಳು ಗುಪ್ತವಾಗಿ ಪಿತೂರಿ ನಡೆಸುತ್ತಿದ್ದು, ಈ ಇಡೀ ಹನಿಟ್ರ್ಯಾಪ್ ಬ್ಲ್ಯಾಕ್‌ಮೇಲ್ ದಂಧೆಯ ಹಿಂದೆ ಸಮಾಜದ ಪ್ರಭಾವಿ ಕುಳಗಳು ಅಡಗಿ ಕುಳಿತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅಂದು ರಾತ್ರಿ ಕಗ್ಗೋಡು ಗ್ರಾಮಕ್ಕೆ ಓಡಿ ಬಂದಿದ್ದ ಪ್ರಭಾವಿ ನಾಯಕನ ವರ್ತನೆ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ತಮ್ಮ ಮೇಲೆ ನಡೆದ ಈ ಅನ್ಯಾಯದ ವಿರುದ್ಧ ಈಗ ಸಂತ್ರಸ್ತ ಸ್ವಾಮೀಜಿಯವರು ಧರ್ಮಯುದ್ಧ ಘೋಷಿಸಿದ್ದು, ತಪ್ಪಿತಸ್ಥರ ವಿರುದ್ಧ ಶೀಘ್ರವೇ ದೂರು ದಾಖಲಿಸಲು ಮುಂದಾಗಿದ್ದಾರೆ. ವಿಶೇಷವೆಂದರೆ, ಸಂಕಷ್ಟದ ಸಮಯದಲ್ಲಿ ಸ್ವಜಾತಿಯ ಐಪಿಎಸ್ ಅಧಿಕಾರಿಯೊಬ್ಬರು ಶ್ರೀಗಳ ಬೆನ್ನಿಗೆ ನಿಂತು ಧೈರ್ಯ ತುಂಬಿದ್ದು, ಅವರಿಗೆ ಕಾನೂನು ರಕ್ಷಣೆ ಸಿಗುವಂತೆ ಮಾಡಿದ್ದಾರೆ.


