ಜಿಲ್ಲೆಸುದ್ದಿ

ಕೊಪ್ಪಳದಲ್ಲಿ ಹೋಳಿ ಕಿರಿಕ್; ಯುವಕನ ಮೇಲೆ ಕಲ್ಲು ಎತ್ತಿ ಹಾಕಿದ ಪುಂಡರು!

ಕೊಪ್ಪಳ: ಗಂಗಾವತಿಯ ವಿರೂಪಾಪುರ ಗಡ್ಡೆ ಬಳಿ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಯುವಕರ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿದೆ. ತುಂಗಭದ್ರಾ ನದಿ ತೀರದಲ್ಲಿ ಪಾರ್ಟಿ ಮಾಡುತ್ತಿದ್ದ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ಆತಂಕದ ವಾತಾವರಣ ನಿರ್ಮಿಸಿತ್ತು. ಹಬ್ಬದ ಸಡಗರದ ನಡುವೆ ನಡೆದ ಈ ಕಿರಿಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಘಟನೆಯ ಅತ್ಯಂತ ಭಯಾನಕ ದೃಶ್ಯವೊಂದು ಈಗ ವೈರಲ್ ಆಗಿದ್ದು, ಗಲಾಟೆಯ ವೇಳೆ ಒಂದು ಗುಂಪಿನ ಯುವಕರು ಮತ್ತೊಂದು ಗುಂಪಿನ ಯುವಕನ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಲು ಯತ್ನಿಸಿರುವ ಆರೋಪ ಕೇಳಿಬಂದಿದೆ. ಈ ಭೀಕರ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆಯ ನಡುಕ ಹುಟ್ಟಿಸುವಂತಿದೆ. ಪಾರ್ಟಿ ಮೂಡ್‌ನಲ್ಲಿದ್ದ ಯುವಕರು ಕ್ಷಣಮಾತ್ರದಲ್ಲಿ ರೌಡಿಗಳಂತೆ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲವಾದರೂ, ವೈರಲ್ ವಿಡಿಯೋ ಆಧರಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಗಲಾಟೆಯಲ್ಲಿ ಭಾಗಿಯಾಗಿದ್ದ ಐವರು ಯುವಕರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನದಿ ತೀರದಲ್ಲಿ ಅಕ್ರಮವಾಗಿ ಪಾರ್ಟಿ ಮಾಡುವುದು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ವಿರೂಪಾಪುರ ಗಡ್ಡೆ ಪ್ರದೇಶವು ಪ್ರವಾಸಿ ತಾಣವಾಗಿರುವುದರಿಂದ ಇಂತಹ ಘಟನೆಗಳು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿವೆ. ಹೋಳಿ ಹಬ್ಬದ ನೆಪದಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡುವ ಪುಂಡರ ಮೇಲೆ ಹದ್ದಿನ ಕಣ್ಣಿಡಲು ಸ್ಥಳೀಯರು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ವಶಕ್ಕೆ ಪಡೆದಿರುವ ಐವರಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Comments (0)

Your email address will not be published. Required fields are marked *

Back to top button