ಹಿಂದೂ ಮುಸ್ಲಿಮರು ಸಾಮೂಹಿಕ ವಿವಾಹ ನೆರವೇರಿದ ಅಪರೂಪದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.. ಬೆಟಗೇರಿ ಅಂಜುಮನ್ ಕಮಿಟಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಒಟ್ಟು 36 ಜೋಡಿಗಳು ಜೀವನಕ್ಕೆ ಕಾಲಿಟ್ಟಿವೆ.
ನಾಡಿನೆಲ್ಲೆಡೆ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ಜಾತಿ ಜಾತಿಗಳ ಕಲಹ ಶುರುವಾಗಿದೆ. ಆದರೆ ಇತ್ತ ನಡೆದಾಡುವ ದೇವರ ನಾಡಿನಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಬದುಕು ಸಾಗಿಸುತ್ತಿದ್ದಾರೆ. ಲಿಂಗೈಕ್ಯ ಪಂಡಿತ ಪುಟ್ಟರಾಜ್ ಗವಾಯಿಗಳ ನಡೆದಾಡಿದ ನೆಲದಲ್ಲಿ ಹಿಂದೂ-ಮುಸ್ಲಿಂ ಬಾಂಧವರ ಸಾಮೂಹಿಕ ವಿವಾವ ಮಹೋತ್ಸವ ಅದ್ಧೂರಿಯಾಗಿ ನಡೆದದ್ದು, 36 ನವದಂಪತಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಲಿಂಗೈಕ್ಯ ಪಂಡಿತ ಪುಟ್ಟರಾಜ್ ಗವಾಯಿಗಳು ನಡೆದಾಡಿದ ನೆಲ, ಸಂಗೀತ ಬೀಡು ಗದಗ ನಗರ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಂಜುಮನ್ ಶಾಲೆ ಆವರಣದಲ್ಲಿ ಹಿಂದೂ, ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ಬಹಳ ಅದ್ಧೂರಿಯಾಗಿ ನಡೆದಿದೆ.
ಬೆಟಗೇರಿ ಅಂಜುಮನ್ ಕಮಿಟಿ ವತಿಯಿಂದ ಸಾಮೂಹಿಕ ವಿವಾಹ ಮಹೋತ್ಸವ ಆಯೋಜನೆ ಮಾಡಲಾಗಿತ್ತು. ಈ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ 36 ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. 26 ಹಿಂದೂ ಜೋಡಿಗಳು, 10 ಮುಸ್ಲಿಂ ಜೋಡಿಗಳು ಹಸೆಮಣೆ ಏರಿದ್ದಾರೆ. ಆ ಮೂಲಕ ನಾಡಿಗೆ ಕೋಮು ಸೌಹಾರ್ದತೆ ಸಂದೇಶ ಸಾರಿದ್ದಾರೆ.
ಈ ವೇಳೆ ಮಾತನಾಡಿದ ಪುಟ್ಟರಾಜ್ ಗವಾಯಿಗಳ ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಇಂದಿನ ದುಬಾರಿ ಜಗತ್ತಿನಲ್ಲಿ ಮದುವೆಗೆ ಲಕ್ಷಾಂತರ ರೂ ಖರ್ಚು ಮಾಡಲಾಗುತ್ತಿದೆ. ಬಡವರಿಗೆ ಮದುವೆ ಮಾಡುವುದಂದರೆ ಕಷ್ಟದ ಕೆಲಸ. ಆದರೆ ಬೆಟಗೇರಿ ಅಂಜುಮನ್ ಕಮಿಟಿ ಸರ್ವಧರ್ಮಗಳ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿದ್ದು ಖುಷಿಯ ವಿಚಾರ ಎಂದಿದ್ದಾರೆ.