ಚಿಕ್ಕಬಳ್ಳಾಪುರ: ಆರೋಗ್ಯಕ್ಕೆ ಪೂರಕವಾಗಿರುವ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಸುಸ್ಥಿರ ಆರೋಗ್ಯದ ದೃಷ್ಟಿಯಿಂದ ಇಂದು ಶ್ರೀಮಂತರೂ ಸಿರಿಧಾನ್ಯಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಿರಿಧಾನ್ಯಗಳ ಮೇಳ, ರೈತ ದಿನ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಕಾರ್ಯಾಗಾರವನ್ನು ಉದ್ಘಾಟಿಸಿದರು. ನಂತರ ಸಚಿವರು ರೈತರೊಂದಿಗೆ ಸಂವಾದ ನಡೆಸಿದರು. ಪ್ರಗತಿ ಪರ ರೈತರಿಗೆ ಸನ್ಮಾನಿಸಿ ಗೌರವಿಸಿದರು. ಕೃಷಿ ಮೇಳದ ಅಂಗವಾಗಿ ವಿವಿಧ ಇಲಾಖೆಗಳು ತೆರಿದಿದ್ದ ಸಿರಿಧಾನ್ಯ ಜಾಗೃತಿ ಮಳಿಗೆಗಳು, ವಸ್ತು ಪ್ರದರ್ಶನ ಕೇಂದ್ರಗಳನ್ನು ಉದ್ಘಾಟನೆ ಮಾಡಿದರು. ಸಿರಿಧಾನ್ಯಗಳ ಮಹತ್ವ ಸಾರುವ ಕರಪತ್ರಗಳನ್ನು ಸಚಿವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದ್ದು, ಅತಿ ಕಡಿಮೆ ನೀರಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಅವಕಾಶವಿದೆ. ಹಲವು ಉತ್ತಮ‌ ಪೋಷಕಾಂಶಗಳನ್ನು ಹೊಂದಿರುವ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸರ್ಕಾರ 2023 ರ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ. ಹಿಂದೆ ಬಡವರು ಮಾತ್ರ ಉಪಯೋಗಿಸುತ್ತಿದ್ದ ಸಿರಿಧಾನ್ಯಗಳತ್ತ ಶ್ರೀಮಂತರೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮೂರುದಿನಗಳ ಕಾಲ ಬೃಹತ್ ಮಟ್ಟದ ಸಿರಿಧಾನ್ಯಗಳ ಮೇಳವನ್ನು ಸರ್ಕಾರವೇ ಆಯೋಜಿಸುತ್ತಿದೆ. ಇಂದು ಸಿರಿಧಾನ್ಯಗಳಿಂದ ಐಸ್ ಕ್ರೀಂ ಸೇರಿದಂತೆ ಹತ್ತು ಹಲವು ಉತ್ಪನ್ನಗಳು ತಯಾರಾಗುತ್ತಿವೆ. ಸಿರಿಧಾನ್ಯಗಳನ್ನು ಪ್ರೋತ್ಸಾಹಿಸಲು ಉತ್ತಮ ಮಾರುಕಟ್ಟೆ ಒದಗಿಸಿ ಬೆಳೆಗಾರರನ್ನು ಪ್ರೋತ್ಸಾಹಿಸಲು ಸರ್ಕಾರ ಚಿಂತನೆ ಮಾಡಿದೆ.ಮುಂದಿನ‌ ದಿನಗಳಲ್ಲಿ ಸಿರಿಧಾನ್ಯಗಳಿಗೆ ಮತ್ತಷ್ಟು ವ್ಯಾಪಕ ಬೇಡಿಕೆ ಸಿಗುವ ನಿರೀಕ್ಷೆ ಇದೆ ಎಂದರು.

ಸಿರಿಧಾನ್ಯಗಳಲ್ಲಿರುವ ಉತ್ತಮ ಪೋಷಕಾಂಶಗಳು ಹಾಗೂ ಸುಸ್ಥಿರ ಅರೋಗ್ಯದ ಮಹತ್ವದಿಂದಾಗಿ ಶ್ರೀಮಂತರ ಆಹಾರದ ಪದ್ಧತಿಯಲ್ಲಿ ಸಿರಿಧಾನ್ಯ ಯುಕ್ತ ಆಹಾರಗಳು ಆದ್ಯತೆ ಪಡೆದಿವೆ,ಎಲ್ಲ ವರ್ಗದ ಜನರ ಆಹಾರ ಪದ್ಧತಿಯಲ್ಲೂ ಸೇರ್ಪಡೆ ಆಗುವ ನಿಟ್ಟಿನಲ್ಲಿ ವ್ಯಾಪಾಕಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿಯೂ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಕೃಷಿ ಇಲಾಖೆಯ ಜಂಟಿ ನಿರ್ದೆಶಕಿ ಜಾವೀದಾ ನಾಸಿಮ್ ಖಾನಂ,ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣ ಸ್ವಾಮಿ, ನಗರಸಭೆ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ರೈತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ರೈತ ಮಹಾಶಯರು,ವಿವಿಧ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.

By admin

Leave a Reply

Your email address will not be published. Required fields are marked *

Verified by MonsterInsights