ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಸರ್ಕಾರ ಈಗ ಹೊಸ ನಿಯಮ ರೂಪಿಸಿದೆ. ಇನ್ಮುಂದೆ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಸಾಲದು, ಪ್ರತಿಯೊಬ್ಬ ಮಹಿಳಾ ಪ್ರಯಾಣಿಕರೂ ‘ಸ್ಮಾರ್ಟ್ ಕಾರ್ಡ್’ ಹೊಂದುವುದನ್ನು ಕಡ್ಡಾಯಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ. ಈ ಮೂಲಕ ಯೋಜನೆಯಲ್ಲಿ ಪಾರದರ್ಶಕತೆ ತರಲು ಮತ್ತು ದುರುಪಯೋಗಕ್ಕೆ ಕಡಿವಾಣ ಹಾಕಲು ಸರ್ಕಾರ ‘ಸ್ಮಾರ್ಟ್’ ಹೆಜ್ಜೆ ಇಟ್ಟಿದೆ.

ಬರುವ ಜೂನ್ 11ಕ್ಕೆ ಶಕ್ತಿ ಯೋಜನೆ ಜಾರಿಯಾಗಿ ಯಶಸ್ವಿ ಮೂರು ವರ್ಷಗಳು ತುಂಬಲಿವೆ. ಇದೇ ಸಂಭ್ರಮದ ಸಂದರ್ಭದಲ್ಲಿ ಸ್ಮಾರ್ಟ್ ಕಾರ್ಡ್ ವಿತರಣಾ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಕಾರ್ಡ್‌ಗಳ ಮುದ್ರಣ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಗಾಗಿ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಮೂರು ತಿಂಗಳಲ್ಲಿ ಈ ಹೊಸ ವ್ಯವಸ್ಥೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈ ಕಾರ್ಡ್‌ಗಳು ನೋಡಲು ‘ಆಯುಷ್ಮಾನ್ ಕಾರ್ಡ್’ ಮಾದರಿಯಲ್ಲಿದ್ದು, ಫಲಾನುಭವಿಯ ಫೋಟೋ, ಹೆಸರು ಮತ್ತು ವಿಶಿಷ್ಟ ದೃಢೀಕರಣ ಸಂಖ್ಯೆಯನ್ನು ಒಳಗೊಂಡಿರುತ್ತವೆ.

ಈ ಬದಲಾವಣೆಗೆ ಮುಖ್ಯ ಕಾರಣವೆಂದರೆ ಆಧಾರ್ ಕಾರ್ಡ್ ತೋರಿಸುವ ವ್ಯವಸ್ಥೆಯಲ್ಲಿ ಕಂಡುಬರುತ್ತಿರುವ ಲೋಪದೋಷಗಳು. ಅನೇಕ ಕಡೆ ನಕಲಿ ದಾಖಲೆಗಳ ಬಳಕೆ ಮತ್ತು ನಿರ್ವಾಹಕರಿಗೆ ಪ್ರಯಾಣಿಕರ ನಿಖರ ಸಂಖ್ಯೆ ದಾಖಲಿಸಲು ಉಂಟಾಗುತ್ತಿರುವ ತೊಂದರೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟ್ ಕಾರ್ಡ್ ಜಾರಿಯಾದ ಮೇಲೆ, ನಿರ್ವಾಹಕರು ಕಾರ್ಡ್ ಸಂಖ್ಯೆಯನ್ನು ತಮ್ಮ ಇಟಿಎಂ ಮಷಿನ್‌ನಲ್ಲಿ ನಮೂದಿಸಿದಾಗ ಅಥವಾ ಸ್ಕ್ಯಾನ್ ಮಾಡಿದಾಗ ಮಾತ್ರ ‘ಶೂನ್ಯ ದರದ ಟಿಕೆಟ್’ ಜನರೇಟ್ ಆಗುತ್ತದೆ. ಇದರಿಂದ ಸರ್ಕಾರಕ್ಕೆ ಸಾರಿಗೆ ಸಂಸ್ಥೆಗಳಿಗೆ ನೀಡಬೇಕಾದ ಹಣದ ಪಾವತಿಯಲ್ಲೂ ನಿಖರತೆ ಬರಲಿದೆ.


