ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ; ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಭೂಕುಸಿತ!

ಹಿಮಾಚಲ ಪ್ರದೇಶ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅವಿರತ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಸಂಭವಿಸಿರುವ ಸರಣಿ ಭೂಕುಸಿತಗಳಿಂದಾಗಿ ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ಪರದಾಡುವಂತಾಗಿದೆ. ಮಂಡಿ ಜಿಲ್ಲೆಯ ಕೋಟ್ಲಿ ಉಪವಿಭಾಗದ ರೋಪಡು ಗ್ರಾಮದಲ್ಲಿ ಬೆಟ್ಟದ ಒಂದು ಭಾಗ ಕುಸಿದು ಬಿದ್ದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹತ್ತಿರದ 9 ಮನೆಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಭೂಕುಸಿತದ ತೀವ್ರತೆಗೆ ಗ್ರಾಮದ ಗೋಶಾಲೆಯೊಂದು ಸಂಪೂರ್ಣವಾಗಿ ನೆಲಸಮವಾಗಿದೆ.
ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಘಾಟಿಗಢದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಮಣಿಕರಣ್-ಬರ್ಶೈನಿ ರಸ್ತೆಯು ಕಳೆದ ಎರಡು ದಿನಗಳಿಂದ ಬಂದ್ ಆಗಿದೆ. ಬೃಹತ್ ಬಂಡೆಗಳು ಮತ್ತು ಮಣ್ಣು ರಸ್ತೆಯ ಮೇಲೆ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಜಚ್ನಿಯಲ್ಲಿ ಉಂಟಾದ ಮಣ್ಣಿನ ಕುಸಿತದಿಂದಾಗಿ ಭುಂತರ್-ಮಣಿಕರಣ್ ಸಂಪರ್ಕ ರಸ್ತೆಯೂ ಬಂದ್ ಆಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಶಾಲಾ ಮಕ್ಕಳು ಮತ್ತು ಪ್ರಯಾಣಿಕರು ಕೆಸರು ತುಂಬಿದ ರಸ್ತೆಯನ್ನು ದಾಟಲು ಹರಸಾಹಸ ಪಡುತ್ತಿದ್ದಾರೆ.
ಭೂಕುಸಿತದ ಜೊತೆಗೆ ಹಿಮಾಚಲದ ಎತ್ತರದ ಪ್ರದೇಶಗಳಲ್ಲಿ ಭಾರಿ ಹಿಮಪಾತವೂ ದಾಖಲಾಗಿದ್ದು, ಒಟ್ಟು 35ಕ್ಕೂ ಹೆಚ್ಚು ಪ್ರಮುಖ ರಸ್ತೆಗಳು ಸಂಚಾರಕ್ಕೆ ಮುಚ್ಚಲ್ಪಟ್ಟಿವೆ. ಅಟಲ್ ಟನಲ್ ಮತ್ತು ಮನಾಲಿ ಹೆದ್ದಾರಿಯಲ್ಲೂ ಹಿಮಪಾತದಿಂದಾಗಿ ಸಂಚಾರ ಸ್ಥಗಿತಗೊಂಡಿದೆ. ಮಂಡಿಯ ಧರಂಪುರ-ಸರ್ಕಾಘಾಟ್ ರಸ್ತೆಯೂ ಮಣ್ಣಿನ ಕುಸಿತಕ್ಕೆ ತುತ್ತಾಗಿದ್ದು, ರಸ್ತೆಗಳನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಯು ಪೋಕ್ಲೇನ್ ಯಂತ್ರಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯು ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟುಮಾಡುತ್ತಿದೆ.
ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದು, ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಪ್ರವಾಸಿಗರು ಮತ್ತು ಪ್ರಯಾಣಿಕರು ಅತ್ಯಗತ್ಯವಿದ್ದಲ್ಲಿ ಮಾತ್ರ ಪ್ರಯಾಣ ಬೆಳೆಸುವಂತೆ ಮತ್ತು ಅಪಾಯಕಾರಿ ಕಣಿವೆ ರಸ್ತೆಗಳಲ್ಲಿ ಸಂಚರಿಸುವಾಗ ಜಾಗರೂಕರಾಗಿರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.




