ಜಿಲ್ಲೆ

ಬೆಂಗಳೂರಿನಲ್ಲಿ ಹೀಟ್ ಸ್ಟ್ರೋಕ್ ಭೀತಿ; 3 ಜಿಲ್ಲೆಗಳಲ್ಲಿ ಮಾತ್ರ ಮಳೆ ಮುನ್ಸೂಚನೆ!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುಡುತ್ತಿರುವ ಬಿಸಿಲಿನ ತಾಪಮಾನದ ನಡುವೆ ಮಲೆನಾಡು ಭಾಗದ ಜನರಿಗೆ ಹವಾಮಾನ ಇಲಾಖೆ ತಂಪು ಸುದ್ದಿಯೊಂದನ್ನು ನೀಡಿದೆ. ಇಂದು ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ತುಂತುರು ಮಳೆಯ ನಿರೀಕ್ಷೆಯಿದ್ದು, ಕಳೆದ ಕೆಲವು ದಿನಗಳಿಂದ ಏರಿಕೆಯಾಗಿದ್ದ ತಾಪಮಾನದಿಂದ ತುಸು ಸಮಾಧಾನ ಸಿಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮತ್ತು ಶುಷ್ಕ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಮಂಡ್ಯ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿರಲಿದೆ. ಮಾರ್ಚ್ ಎರಡನೇ ವಾರದ ನಂತರ ಬಿಸಿಲು ಮತ್ತಷ್ಟು ಏರಿಕೆಯಾಗಲಿದ್ದು, ಜನಸಾಮಾನ್ಯರು ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಉಷ್ಣಾಂಶದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ‘ಹೀಟ್ ಸ್ಟ್ರೋಕ್’ ಭೀತಿಯ ಬಗ್ಗೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರು ವಿಶೇಷವಾಗಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗದಂತೆ ಸೂಚಿಸಲಾಗಿದೆ. ಡಿಹೈಡ್ರೇಶನ್ ತಪ್ಪಿಸಲು ಹೆಚ್ಚಿನ ಪ್ರಮಾಣದಲ್ಲಿ ನೀರು, ತಂಪು ಪಾನೀಯ ಹಾಗೂ ಹಣ್ಣುಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಮುಖ್ಯವಾಗಿ ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಬಿಸಿಲಿನಿಂದ ದೂರವಿರಲು ತಿಳಿಸಲಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿಯೂ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈ ವರ್ಷವೂ ಕಠಿಣ ಬೇಸಿಗೆ ಎದುರಾಗುವ ಮುನ್ಸೂಚನೆಗಳು ದಟ್ಟವಾಗಿವೆ.

Comments (0)

Your email address will not be published. Required fields are marked *

Back to top button