Top Newsಜಿಲ್ಲೆರಾಜಕೀಯರಾಜ್ಯಸುದ್ದಿ

ಮಂಡ್ಯಕ್ಕೆ ಹೆಚ್‌ಡಿಕೆ ಬಂಪರ್ ಕೊಡುಗೆ; 100 ಎಕರೆ ಜಾಗಕ್ಕೆ ಮನವಿ!

ಕೇಂದ್ರ ಬಜೆಟ್ ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. 16 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಕೇಂದ್ರದ ದೂರದೃಷ್ಟಿಯ ಬಜೆಟ್ ಅರ್ಥವಾಗಿಲ್ಲ ಎಂದು ಟೀಕಿಸಿದ ಅವರು, ರಾಜ್ಯ ಸರ್ಕಾರವೇ ಕಳೆದ ಎರಡು ವರ್ಷಗಳಿಂದ ಜನರಿಗೆ ‘ಖಾಲಿ ಚಂಬು’ ನೀಡುತ್ತಿದೆ ಎಂದು ತಿರುಗೇಟು ನೀಡಿದರು. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಮಂಡ್ಯಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಹೆಚ್‌ಡಿಕೆ ಅವರು ಭರ್ಜರಿ ಯೋಜನೆಯೊಂದನ್ನು ಘೋಷಿಸುವ ಮೂಲಕ ಉತ್ತರ ನೀಡಿದ್ದಾರೆ. ಮಂಡ್ಯದಲ್ಲಿ ಆಟೋಮೊಬೈಲ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಬೃಹತ್ ಆಟೋಮೊಬೈಲ್ ಟೆಸ್ಟಿಂಗ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ . ಈ ಯೋಜನೆಯು ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ 100 ಎಕರೆ ಜಾಗವನ್ನು ಮಂಜೂರು ಮಾಡುವಂತೆ ಕೋರಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ಕುಮಾರಸ್ವಾಮಿ ತಿಳಿಸಿದ ಅವರು, ತಮಗೆ ಪ್ರಧಾನಿಗಳು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದು, ರಾಜ್ಯದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಪ್ರತಿಪಾದಿಸಿದ ಅವರು, ಮಂಡ್ಯದ ಶಾಸಕರ ಟೀಕೆಗಳಿಗೆ ಈ ಯೋಜನೆಯೇ ನನ್ನ ಉತ್ತರ ಎಂದು ಖಡಕ್ ಉತ್ತರ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button