
ರಾಜ್ಯಾದ್ಯಂತ ಇಂದು ಯುಗಾದಿ ಹಬ್ಬದ ಸಡಗರ ಮನೆ ಮಾಡಿದೆ. ರಾಜಧಾನಿ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣು ಹಾಗೂ ಮಾವಿನ ಸೊಪ್ಪು ಖರೀದಿಸಲು ಜನಸಾಗರವೇ ಹರಿದುಬಂದಿದ್ದು, ವ್ಯಾಪಾರ ಜೋರಾಗಿ ನಡೆದಿದೆ. ಹಬ್ಬದ ಈ ಸಂಭ್ರಮದ ನಡುವೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಕಳೆಗಟ್ಟಿದ್ದು, ಉಪಚುನಾವಣೆ ಹಾಗೂ ಮಂಡ್ಯದ ಮೈತ್ರಿ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.
ಧಾರವಾಡ: ಜಿಲ್ಲೆಯ ಕಲಘಟಗಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಆಲಿಕಲ್ಲು ಮಳೆ ಜನರನ್ನು ಅಚ್ಚರಿಗೀಡು ಮಾಡಿದೆ. ರಸ್ತೆ, ಮನೆ ಹಾಗೂ ಹೊಲಗದ್ದೆಗಳು ಮಂಜುಗಡ್ಡೆಯಿಂದ ಆವೃತವಾಗಿ ಇಡೀ ಊರೇ ಕಾಶ್ಮೀರದಂತೆ ಭಾಸವಾಗುತ್ತಿತ್ತು. ಆದರೆ, ಈ ತಾತ್ಕಾಲಿಕ ಸೌಂದರ್ಯದ ಹಿಂದೆ ಹವಾಮಾನ ವೈಪರೀತ್ಯದ ಎಚ್ಚರಿಕೆಯ ಗಂಟೆ ಅಡಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ತಜ್ಞ ಡಾ. ಪೋತದಾರ ಅವರ ಪ್ರಕಾರ, ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಮತ್ತು ತಾಪಮಾನ ಏರಿಕೆಯಿಂದಾಗಿ ತೇವಾಂಶವು ಹೆಚ್ಚಿನ ಪ್ರಮಾಣದಲ್ಲಿ ತಂಪಾಗಿ ಮಂಜುಗಡ್ಡೆಯಾಗಿ ಪರಿವರ್ತನೆಯಾಗುತ್ತಿದೆ. ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಕಲಘಟಗಿಯಲ್ಲಿ ಕಾಡು ನಾಶ ಹಾಗೂ ನಗರೀಕರಣದಿಂದ ಉಷ್ಣಾಂಶದಲ್ಲಿ ಏರಿಳಿತ ಉಂಟಾಗಿ ಇಂತಹ ಅನಾಹುತಗಳು ಸಂಭವಿಸುತ್ತಿವೆ.
ಈ ಆಲಿಕಲ್ಲು ಮಳೆಯಿಂದಾಗಿ ರೈತರು ಕಣ್ಣೀರು ಹಾಕುವಂತಾಗಿದೆ. ಮಾಚಾಪುರ, ದೇವಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದಿದ್ದ ಕಬ್ಬು, ಗೋವಿನಜೋಳ ಹಾಗೂ ಸೋಯಾಬೀನ್ ನಾಶವಾಗಿದೆ. ವಿಶೇಷವಾಗಿ ಮಾವಿನ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಮನೆಗಳ ಹೆಂಚುಗಳು ಪುಡಿಯಾಗಿವೆ. ಪ್ರಕೃತಿಯ ಈ ವಿಕೋಪಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹವಾಮಾನ ವೈಪರೀತ್ಯವೇ ಇದಕ್ಕೆಲ್ಲ ಕಾರಣವಾಗಿದ್ದು, ಭೂಮಿಯ ಮೇಲೆ ಹೋಗಿರುವ ತೇವಾಂಶ ಕೊಂಚ ಪ್ರಮಾಣದಲ್ಲಿ ತಂಪಾದರೆ ಮಳೆ ಸುರಿಯುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ತಂಪಾದರೆ ಅದು ಮಂಜುಗಡ್ಡೆಯಾಗುತ್ತದೆ. ಕೆಲವು ಚಿಕ್ಕ ಚಿಕ್ಕ ಆಲಿಕಲ್ಲು ಬೀಳುತ್ತವೆ. ಕೆಲವೊಮ್ಮೆ ದೊಡ್ಡ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿರುವುದನ್ನು ನಾವು ಗಮನಿಸಿದ್ದೇವೆ ಎಂದು ಡಾ. ಪೋತದಾರ ಮಾಹಿತಿ ನೀಡಿದರು.




