TUMKURರಾಜಕೀಯಸುದ್ದಿ

“ಗೃಹಲಕ್ಷ್ಮಿ ಬೇಡಯ್ಯ, ಮನೆ ನೀಡಯ್ಯ”: ಅಧಿಕಾರಿಗಳ ವಿರುದ್ಧ ಹಾಡಿನ ಮೂಲಕ ಮಹಿಳೆ ಚಾಟಿ..!

ತುಮಕೂರು: ತುಮಕೂರಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಿರಾ ಪಟ್ಟಣದ ನಿವಾಸಿ ರಾಬಿಯಾ ಅಸ್ಲಾಂ ಪಾಷಾ ಎಂಬ ಮಹಿಳೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿಶಿಷ್ಟವಾಗಿ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಉಪಸ್ಥಿತಿಯಲ್ಲೇ ವೇದಿಕೆ ಏರಿದ ಈ ಮಹಿಳೆ, ತಮಗೆ ಮನೆ ಜಾಗದ ಹಕ್ಕುಪತ್ರ ನೀಡದ ಅಧಿಕಾರಿಗಳ ವಿರುದ್ಧ ಹಾಡಿನ ಮೂಲಕ ಚಾಟಿ ಬೀಸಿದ್ದಾರೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗಿಂತ ತಮಗೆ ವಾಸಿಸಲು ಸ್ವಂತ ಮನೆಯ ಹಕ್ಕುಪತ್ರ ಮುಖ್ಯ ಎಂದು ಪ್ರತಿಪಾದಿಸಿದ ಅವರು, “ಗೃಹಲಕ್ಷ್ಮಿ ಬೇಡಯ್ಯ, ಮನೆ ನೀಡಯ್ಯ” ಎಂಬ ಅರ್ಥದ ವ್ಯಂಗ್ಯಗೀತೆಯನ್ನು ಹಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿಯೇ ಮನವಿ ಮಾಡಿದರು.

ಈ ಹಿಂದೆ 2024ರಲ್ಲಿ ಮುಖ್ಯಮಂತ್ರಿಗಳು ಭೇಟಿ ನೀಡಿದ್ದ ಸಂದರ್ಭದಲ್ಲೂ ರಾಬಿಯಾ ಇದೇ ರೀತಿಯ ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಜಿಲ್ಲಾಧಿಕಾರಿಗಳು ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಇದುವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂಬುದು ಅವರ ಅಳಲಾಗಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ರಾಬಿಯಾ, ಇಂದು ತನ್ನ ಇಬ್ಬರು ಮಕ್ಕಳೊಂದಿಗೆ ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆಯ ಮೇಲೆ ತಮ್ಮ ಹಾಡಿನ ಮೂಲಕ ಅಸಹಾಯಕತೆ ಮತ್ತು ಆಕ್ರೋಶವನ್ನು ಹೊರಹಾಕಿದರು. ಅಧಿಕಾರಿಗಳ ವಿಳಂಬ ಧೋರಣೆಯಿಂದ ಬೇಸತ್ತಿರುವ ಸಾಮಾನ್ಯ ಮಹಿಳೆಯೊಬ್ಬಳು ಜನಪ್ರತಿನಿಧಿಗಳ ಮುಂದೆಯೇ ಇಂತಹ ವಿನೂತನ ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ.

Comments (0)

Your email address will not be published. Required fields are marked *

Back to top button