ಬೆಂಗಳೂರು: ರಾಜ್ಯ ಸರ್ಕಾರ ಶಾಲೆಗಳನ್ನು ಮುಚ್ಚುತ್ತಿದೆ. ಮಠಮಾನ್ಯಗಳು ಬಡವರಿಗೆ, ದುರ್ಬಲರಿಗೆ ಶಿಕ್ಷಣ ನೀಡಲು ಸರ್ಕಾರದ ಮಾಡುವ ಕೆಲಸವನ್ನು ಮಾಡುತ್ತಿವೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ..
ನಗರದಲ್ಲಿ ಶ್ರೀ ಆದಿಚುನಚಗಿರಿ ಶಿಕ್ಷಣ ಟ್ರಸ್ಟ್ ನ 17ನೇ ಬಿಜಿಎಸ್ ಸಂಸ್ಥಾಪನಾ ದಿನ ಹಾಗೂ ಬಿಜಿಎಸ್ ಉತ್ಸವದ ಉದ್ಘಾಟನಾ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ರೈತರು, ಬಡವರು, ಆರ್ಥಿಕ ದುರ್ಬಲರ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗಳಿಗೆ ಸರ್ಕಾರ ಬೀಗ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಮಠಗಳು ನಾಡಿನ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಸಚಿವರು ಹೇಳಿದರು.
ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭ. ಅವುಗಳ ನಿರ್ವಹಣೆ ಹಾಗೂ ನಡೆಸಿಕೊಂಡು ಹೋಗುವುದು ಸುಲಭವಲ್ಲ. ಆದರೆ, ದಕ್ಷತೆ, ಕ್ಷಮತೆಯಿಂದ ಮಠಗಳು ಸುನಾಯಾಸವಾಗಿ ನಡೆಸಿಕೊಂಡು ಹೋಗುತ್ತಿವೆ. ದೂರದೃಷ್ಟಿ, ಸಮಾಜದ ಕುರಿತಾದ ಕಾಳಜಿಯಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮಠಗಳು ಕೇವಲ ಶಿಕ್ಷಣ ಸಂಸ್ಥೆಗಳನ್ನು ಅಷ್ಟೇ ನಡೆಸುತ್ತಿಲ್ಲ. ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಅಲ್ಲದೆ, ಸಮಾಜ ಸೇವೆಯ ನಡುವೆಯೇ ಆಧ್ಯಾತ್ಮ ಕ್ಷೇತ್ರದಲ್ಲಿಯೂ ನಿಸ್ವಾರ್ಥವಾಗಿ ತೊಡಗಿಸಿಕೊಂಡಿವೆ. ಮುಂದಿನ ತಲೆಮಾರಿಗೆ ಗಟ್ಟಿಯಾದ, ಉತ್ತಮ ಮೌಲ್ಯಗಳನ್ನು ಕಲಿಸುವ ಶಿಕ್ಷಣ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಮಠವು ಮುಂಚೂಣಿಯಲ್ಲಿ ನಿಂತು ಸಮಾಜದಲ್ಲಿ ಅರಿವು ಮೂಡಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಶ್ರೀ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಶ್ರೀ ಆದಿಚುನಚಗಿರಿ ಶಿಕ್ಷಣ ಟ್ರಸ್ಟ್ ಮುಖ್ಯಸ್ಥರಾದ ಶ್ರೀ ಪ್ರಕಾಶನಾಥ ಸ್ವಾಮೀಜಿ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್, ಗ್ಯಾರಂಟಿ ನ್ಯೂಸ್ ಮುಖ್ಯಸ್ಥರಾದ ಶಿವಸ್ವಾಮಿ, ಹಿರಿಯ ನಟಿ ಮಾಲಾಶ್ರೀ, ನಟಿ ಆರಾಧನಾ ಮುಂತಾದವರು ಉಪಸ್ಥಿತರಿದ್ದರು.


