ಸಿನಿಮಾ

ಮಾರ್ಚ್ 6ಕ್ಕೆ “ಗಾರ್ಜಿಯಸ್ ರಾಸ್ಕಲ್” ಎಂಟ್ರಿ;ಡಾರ್ಕ್ ಕಾಮಿಡಿ ಮೂಲಕ ಸಿದ್ಧವಾದ ಹೊಸತಂಡ!

ಕನ್ನಡ ಚಿತ್ರರಂಗದಲ್ಲಿ ಹೊಸತನದ ಗಾಳಿ ಬೀಸುತ್ತಿದ್ದು, ಈ ಸಾಲಿಗೆ ಹೊಸತಂಡದ ಮತ್ತೊಂದು ವಿಭಿನ್ನ ಪ್ರಯತ್ನ “ಗಾರ್ಜಿಯಸ್ ರಾಸ್ಕಲ್” ಸೇರ್ಪಡೆಯಾಗಿದೆ. ಶೀರ್ಷಿಕೆಯಿಂದಲೇ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರವು ಇದೇ ಮಾರ್ಚ್ 6ರಂದು ರಾಜ್ಯಾದ್ಯಂತ ಬೆಳ್ಳಿಪರದೆಗೆ ಬರಲು ಸಿದ್ಧವಾಗಿದೆ.

ಅದೃಷ್ಟಲಕ್ಷ್ಮೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್. ಚೇತನ್ ಕೃಷ್ಣ ಅವರು ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಮಿಳಿನ ಖ್ಯಾತ ಗಾಯಕ ವೇಲುಮುರುಗನ್ ಹಾಗೂ “ಸರಿಗಮಪ” ಖ್ಯಾತಿಯ ದರ್ಶನ್ ನಾರಾಯಣ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಗೀತೆಗಳು ಕೇಳುಗರ ಮನಗೆದ್ದಿವೆ.

ಪ್ರಮೋದ್ ಜೋಯಿಸ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಇದೊಂದು ಪಕ್ಕಾ ‘ಡಾರ್ಕ್ ಕಾಮಿಡಿ’ ಶೈಲಿಯ ಕಥಾಹಂದರವನ್ನು ಹೊಂದಿದೆ ಎಂದು ಚಿತ್ರತಂಡ ತಿಳಿಸಿದೆ. ಪ್ರೇರಣಾ ಭಟ್, ಯುವಿನ್, ರಾಜವೀರ್ ಸಿಂಗ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಬೆಂಗಳೂರು ಮತ್ತು ಮಹಾರಾಷ್ಟ್ರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಿರುವ ಈ ಸಿನಿಮಾ, ನೋಡುಗರಿಗೆ ನಗು ಮತ್ತು ಕುತೂಹಲದ ಸಮರಸವನ್ನು ನೀಡುವ ಭರವಸೆ ಮೂಡಿಸಿದೆ. ಕೆ.ಜಿ.ಎಫ್ ಖ್ಯಾತಿಯ ನಂದು ಅವರ ಶಬ್ದ ವಿನ್ಯಾಸ ಹಾಗೂ ಶಂಕು ಅವರ ಛಾಯಾಗ್ರಹಣ ಚಿತ್ರದ ತಾಂತ್ರಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದೆ.

Comments (0)

Your email address will not be published. Required fields are marked *

Back to top button