ರಾಜ್ಯಸುದ್ದಿ

ರೊಟ್ಟಿ ಕೇಂದ್ರಗಳಿಗೆ ತಟ್ಟಿದ ಗ್ಯಾಸ್ ಬಿಸಿ..!

ರಾಯಚೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಉಂಟಾಗಿರುವ ತೈಲ ಬಿಕ್ಕಟ್ಟು ಈಗ ರಾಯಚೂರಿನ ರೊಟ್ಟಿ ಕೇಂದ್ರಗಳಿಗೂ ಬಲವಾಗಿ ತಟ್ಟಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ (Commercial LPG) ತೀವ್ರ ಅಭಾವ ಎದುರಾಗಿರುವುದರಿಂದ ಜಿಲ್ಲೆಯ ರೊಟ್ಟಿ ಕೇಂದ್ರಗಳು ಅನಿವಾರ್ಯವಾಗಿ ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ಪ್ರತಿನಿತ್ಯ ಗ್ರಾಹಕರಿಗೆ ಬಿಸಿಬಿಸಿ ಜೋಳದ ರೊಟ್ಟಿ, ಚಪಾತಿ ಮತ್ತು ಪಲ್ಯಗಳನ್ನು ಬಡಿಸುತ್ತಿದ್ದ ಈ ಕೇಂದ್ರಗಳು ಇಂಧನ ಸಿಗದೆ ಸ್ತಬ್ಧವಾಗಿವೆ. ಇದರಿಂದಾಗಿ ಹೊಟೇಲ್ ಊಟ ಬಿಟ್ಟು ರೊಟ್ಟಿ ಊಟವನ್ನೇ ನೆಚ್ಚಿಕೊಂಡಿದ್ದ ಬ್ಯಾಚುಲರ್‌ಗಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ಪರದಾಡುವಂತಾಗಿದೆ.

ಸಿಲಿಂಡರ್ ಪೂರೈಕೆ ಹೆಚ್ಚಿಸುವ ಕುರಿತು ಸಚಿವರು ಭರವಸೆ ನೀಡಿದ್ದರೂ, ರಾಯಚೂರಿನಲ್ಲಿ ಇಂದಿಗೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಲಭ್ಯತೆ ಸುಧಾರಿಸಿಲ್ಲ. ಇಷ್ಟು ದಿನ ಅಡುಗೆಯ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಹೇಗೋ ನಿಭಾಯಿಸುತ್ತಿದ್ದ ಮಾಲೀಕರು, ಈಗ ಪೂರ್ತಿಯಾಗಿ ಕೆಲಸ ಸ್ಥಗಿತಗೊಳಿಸಿ ‘ಗ್ಯಾಸ್ ಸಿಲಿಂಡರ್ ಇಲ್ಲದ ಕಾರಣ ಕೇಂದ್ರ ಬಂದ್’ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಗ್ಯಾಸ್ ಪೂರೈಕೆ ಸಹಜ ಸ್ಥಿತಿಗೆ ಮರಳಿದ ನಂತರವೇ ಅಡುಗೆ ತಯಾರಿಕೆ ಆರಂಭಿಸುವುದಾಗಿ ಮಾಲೀಕರು ತಿಳಿಸಿದ್ದು, ಅಲ್ಲಿಯವರೆಗೆ ರೊಟ್ಟಿ ಊಟದ ಸವಿ ಸವಿಯುತ್ತಿದ್ದ ಜನರಿಗೆ ಸಂಕಷ್ಟ ತಪ್ಪದಂತಾಗಿದೆ.

Comments (0)

Your email address will not be published. Required fields are marked *

Back to top button