Chikkaballapuraಜಿಲ್ಲೆ

ನಂದಿ ಬೆಟ್ಟದಲ್ಲಿ ಗ್ಯಾಸ್ ಬಿಸಿ; ಹೋಟೆಲ್ ಬಂದ್ ಭೀತಿಯಿಂದ ಪ್ರವಾಸಿಗರ ಸಂಖ್ಯೆ ಕ್ಷೀಣ!

ಚಿಕ್ಕಬಳ್ಳಾಪುರ : ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯು ಈಗ ರಾಜ್ಯದ ಪ್ರವಾಸೋದ್ಯಮದ ಮೇಲೆ ನೇರವಾದ ಹೊಡೆತ ನೀಡಿದೆ. ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ರಾಜ್ಯದ ಹಲವು ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಇನ್ನು ಕೆಲವು ಹೋಟೆಲ್‌ಗಳಲ್ಲಿ ಅನಿವಾರ್ಯವಾಗಿ ಆಧುನಿಕ ಸೌಲಭ್ಯಗಳನ್ನು ಬಿಟ್ಟು ಹಳೆಯ ಪದ್ಧತಿಯಂತೆ ಸೌದೆ ಒಲೆಗಳನ್ನೇ ಅವಲಂಬಿಸಿ ಅಡುಗೆ ಮಾಡುವ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಇದು ಹೋಟೆಲ್ ಮಾಲೀಕರಿಗೆ ಮಾತ್ರವಲ್ಲದೆ, ಹೊರಗಿನ ಆಹಾರವನ್ನೇ ನಂಬಿರುವ ಪ್ರವಾಸಿಗರಿಗೂ ದೊಡ್ಡ ತಲೆನೋವಾಗಿ ಪರಿಣಾಮ ಬೀರಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ನಂದಿಗಿರಿಧಾಮದಲ್ಲಿ ಈ ಬಾರಿ ಭಾನುವಾರದಂದು ಅನಿರೀಕ್ಷಿತ ಮೌನ ಆವರಿಸಿತ್ತು. ವಾರಾಂತ್ಯಗಳಲ್ಲಿ ಸಾಮಾನ್ಯವಾಗಿ ಸಾವಿರಾರು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಗಿರಿಧಾಮವು ಈ ಬಾರಿ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಗಿರಿಧಾಮಕ್ಕೆ ಹೋದರೆ ಅಲ್ಲಿನ ಹೋಟೆಲ್‌ಗಳಲ್ಲಿ ಊಟ ಮತ್ತು ತಿಂಡಿ ಸರಿಯಾದ ಸಮಯಕ್ಕೆ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಆತಂಕ ಪ್ರವಾಸಿಗರಲ್ಲಿ ಮನೆಮಾಡಿದೆ. ಗ್ಯಾಸ್ ಕೊರತೆಯಿಂದ ಹೋಟೆಲ್‌ಗಳು ಕಾರ್ಯನಿರ್ವಹಿಸದಿದ್ದರೆ ಹಸಿವಿನಿಂದ ಪರದಾಡಬೇಕಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಪ್ರವಾಸಿಗರು ನಂದಿ ಬೆಟ್ಟದತ್ತ ಮುಖ ಮಾಡದಿರುವುದು ಕಂಡುಬಂದಿದೆ.

ಆದರೆ, ನಂದಿಗಿರಿಧಾಮದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಹೋಟೆಲ್‌ಗಳಲ್ಲಿ ಯಾವುದೇ ರೀತಿಯ ಅನಿಲದ ಕೊರತೆ ಕಂಡುಬಂದಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಸರ್ಕಾರಿ ಸ್ವಾಮ್ಯದ ಈ ಹೋಟೆಲ್‌ಗಳಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸಂಗ್ರಹ ಇರುವುದರಿಂದ ಅವು ಎಂದಿನಂತೆ ತಮ್ಮ ಸೇವೆಗಳನ್ನು ಮುಂದುವರಿಸಿವೆ. ಖಾಸಗಿ ಹೋಟೆಲ್‌ಗಳು ಸಂಕಷ್ಟದಲ್ಲಿರುವಾಗ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದರೂ, ಪ್ರವಾಸಿಗರ ಸಂಖ್ಯೆಯಲ್ಲಿನ ದಿಢೀರ್ ಕುಸಿತವು ಒಟ್ಟಾರೆ ಪ್ರವಾಸೋದ್ಯಮದ ಆದಾಯಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

Comments (0)

Your email address will not be published. Required fields are marked *

Back to top button