Wednesday, February 18, 2026
24.1 C
Bengaluru
Google search engine
LIVE
ಮನೆದೇಶ/ವಿದೇಶ2 ವರ್ಷಗಳಲ್ಲಿ 8 ಮರಿಗಳಿಗೆ ಜನ್ಮ ನೀಡಿದ ‘ಸೂಪರ್ ಮಾಮ್’ ಗಾಮಿನಿ!

2 ವರ್ಷಗಳಲ್ಲಿ 8 ಮರಿಗಳಿಗೆ ಜನ್ಮ ನೀಡಿದ ‘ಸೂಪರ್ ಮಾಮ್’ ಗಾಮಿನಿ!

ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದ್ದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸಂತತಿ ಗಣನೀಯವಾಗಿ ಏರಿಕೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿದ್ದ ‘ಗಾಮಿನಿ’ ಎಂಬ ಹೆಣ್ಣು ಚೀತಾ ಇದೀಗ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಉದ್ಯಾನವನದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಈ ಹೊಸ ಅತಿಥಿಗಳ ಆಗಮನದೊಂದಿಗೆ ಕುನೋದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ ಈಗ 38ಕ್ಕೆ ತಲುಪಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.

ಗಾಮಿನಿ ಚೀತಾವನ್ನು 2022ರಲ್ಲಿ ಚೀತಾ ಮರುಪರಿಚಯ ಕಾರ್ಯಕ್ರಮದಡಿ ಭಾರತಕ್ಕೆ ತರಲಾಗಿತ್ತು. ಈಕೆ ಈಗಾಗಲೇ ಎರಡು ವರ್ಷಗಳ ಹಿಂದೆ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ಭಾರತದ ಮಣ್ಣಿಗೆ ಒಗ್ಗಿಕೊಂಡಿದ್ದಳು. ಇದೀಗ ಎರಡನೇ ಬಾರಿಗೆ ಮೂರು ಮರಿಗಳಿಗೆ ಜನ್ಮ ನೀಡುವ ಮೂಲಕ ಒಟ್ಟು 8 ಮರಿಗಳ ತಾಯಿಯಾಗಿದ್ದಾಳೆ. ಭಾರತಕ್ಕೆ ಆಮದು ಮಾಡಿಕೊಂಡ ನಂತರ ಇಲ್ಲಿನ ಪರಿಸರದಲ್ಲಿ ಜನಿಸಿದ ಚೀತಾಗಳ ಒಟ್ಟು ಸಂಖ್ಯೆ 27ಕ್ಕೆ ಏರಿಕೆಯಾಗಿರುವುದು ಈ ಯೋಜನೆಯ ದೃಢನಿಶ್ಚಯಕ್ಕೆ ಸಾಕ್ಷಿಯಾಗಿದೆ.

1952ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಿದ ನಂತರ, ಈ ಭವ್ಯ ಪ್ರಾಣಿಗಳನ್ನು ಮರಳಿ ತರಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶೇಷ ಯೋಜನೆ ರೂಪಿಸಲಾಗಿತ್ತು. 2022ರ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಬಂದ ಮೊದಲ ಬ್ಯಾಚ್ ಚೀತಾಗಳನ್ನು ಪ್ರಧಾನಿಯವರೇ ಕುನೋ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ಆರಂಭದಲ್ಲಿ ಹತ್ತು ಚೀತಾಗಳು ಸಾವನ್ನಪ್ಪಿದಾಗ ಯೋಜನೆಯ ಬಗ್ಗೆ ಆತಂಕ ವ್ಯಕ್ತವಾಗಿತ್ತಾದರೂ, ನಂತರದ ದಿನಗಳಲ್ಲಿ ಚೀತಾಗಳ ಸಂತತಿಯಲ್ಲಿ ಕಂಡ ಗಣನೀಯ ಏರಿಕೆ ಎಲ್ಲರಿಗೂ ಸಮಾಧಾನ ತಂದಿದೆ.

ಕಳೆದ ವರ್ಷ ಭಾರತೀಯ ಮೂಲದ ‘ಮುಖಿ’ ಎಂಬ ಚೀತಾ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ದಾಖಲೆ ಬರೆದಿತ್ತು. ಈಗ ಗಾಮಿನಿಯ ಯಶಸ್ವಿ ಹೆರಿಗೆಯು ಕುನೋ ರಾಷ್ಟ್ರೀಯ ಉದ್ಯಾನವನವನ್ನು ಚೀತಾಗಳ ಸುರಕ್ಷಿತ ತಾಣವನ್ನಾಗಿ ಪರಿವರ್ತಿಸಿದೆ. ವನ್ಯಜೀವಿ ಪ್ರೇಮಿಗಳು ಮತ್ತು ವಿಜ್ಞಾನಿಗಳು ಈ ಬೆಳವಣಿಗೆಯನ್ನು ಭಾರತದ ಯಶಸ್ವಿ ಸಂರಕ್ಷಣಾ ಪ್ರಯತ್ನದ ಸಂಕೇತವೆಂದು ಬಣ್ಣಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments